ವಾಷಿಂಗ್‌ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ (Barack Obama) ಹಾಗೂ ಜೋ ಬೈಡನ್ (Joe Biden) ಸೇರಿದಂತೆ ಬುಷ್ (George Bush) ಕುಟುಂಬದವರನ್ನು ವೈಟ್ ಹೌಸ್‌ಗೆ (White House) ಫುಟ್‌ಬಾಲ್ (Football) ಪಂದ್ಯ ವೀಕ್ಷಿಸಲು ಆಹ್ವಾನಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಬಿಡುಗಡೆಯಾದ ‘ಸ್ಟೋರಿಟೈಮ್ ವಿತ್ ದ ಸೆಕೆಂಡ್ ಲೇಡಿ’ (Storytime with the Second Lady) ಎಂಬ ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಟ್ರಂಪ್ ಈ ಕುರಿತು ಮಾತನಾಡಿದ್ದಾರೆ. ಅಮೆರಿಕದ ದ್ವಿತೀಯ ಮಹಿಳೆ ಉಷಾ ವಾನ್ಸ್ (Usha Vance) ಅವರು ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಟ್ರಂಪ್ ಮಕ್ಕಳ ಪುಸ್ತಕವೊಂದನ್ನು ಓದುತ್ತಾ ಈ ಆಸಕ್ತಿದಾಯಕ ಪ್ರಸ್ತಾಪವನ್ನು ಮಾಡಿದ್ದಾರೆ.
ಅವರ ಜೊತೆ ಫುಟ್‌ಬಾಲ್ ನೋಡಬೇಕು!
ವೈಟ್‌ಹೌಸ್ ಹಿಸ್ಟಾರಿಕಲ್ ಅಸೋಸಿಯೇಷನ್ ಪ್ರಕಟಿಸಿರುವ ‘ಪ್ರೆಸಿಡೆಂಟ್ಸ್ ಪ್ಲೇ!’ (President’s Play!) ಪುಸ್ತಕವನ್ನು ಓದುತ್ತಿದ್ದಾಗ, ಶ್ವೇತಭವನದಲ್ಲಿ ಸೂಪರ್ ಬೌಲ್ (ಫುಟ್‌ಬಾಲ್ ಪಂದ್ಯ) ವೀಕ್ಷಣೆ ಆಯೋಜಿಸಿರುವ ಚಿತ್ರವಿರುವ ಪುಟವನ್ನು ನೋಡಿ ಟ್ರಂಪ್ ತಿಳಿಸಿದ್ದಾರೆ.
“ನಾನು ಬರಾಕ್ ಹುಸೇನ್ ಒಬಾಮಾ, ಜೋ ಬೈಡನ್ ಮತ್ತು ಬುಷ್ ಕುಟುಂಬದವರನ್ನು ಒಟ್ಟಿಗೆ ಕುಳಿತು ಫುಟ್‌ಬಾಲ್ ಪಂದ್ಯ ವೀಕ್ಷಿಸಲು ಆಹ್ವಾನಿಸಬೇಕೇ? ಇದೊಂದು ಅದ್ಭುತ ಕಥೆಯಾಗಬಹುದು, ಮಾಧ್ಯಮಗಳಂತೂ ಕ್ರೇಜಿ ಆಗಿಬಿಡುತ್ತವೆ” ಎಂದು ಟ್ರಂಪ್ ತಮಾಷೆಯಾಗಿ ಹೇಳಿದ್ದಾರೆ.
Trump:
Maybe I should invite Barack Hussein Obama, Joe Biden, with the Bushes—or Bush.
Maybe I should invite some of those people to watch a football game together. Wouldn’t that be a nice story?
The press would go wild. pic.twitter.com/GYcgE4e2Wk
— Clash Report (@clashreport) July 3, 2026
ಬಿಲ್ ಕ್ಲಿಂಟನ್ ಒಳ್ಳೆಯವರು ಎಂದ ಟ್ರಂಪ್!
ತಮಗೆ ರಾಜಕೀಯವಾಗಿ ಕಡು ವಿರೋಧಿಗಳಾಗಿರುವ ಒಬಾಮಾ ಮತ್ತು ಬೈಡನ್ ಅವರನ್ನು ಸದಾ ಸಾರ್ವಜನಿಕವಾಗಿ ಟೀಕಿಸುವ ಟ್ರಂಪ್, ಇದೇ ಕಾರ್ಯಕ್ರಮದಲ್ಲಿ ಮತ್ತೊಬ್ಬ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನು ಶ್ಲಾಘಿಸಿದ್ದಾರೆ. ಕ್ಲಿಂಟನ್ ತಮ್ಮ ಅಧಿಕಾರಾವಧಿಯಲ್ಲಿ ವೈಟ್‌ಹೌಸ್‌ನಲ್ಲಿ ರನ್ನಿಂಗ್ ಟ್ರ್ಯಾಕ್ ನಿರ್ಮಿಸಿಕೊಂಡಿದ್ದ ಪುಟವನ್ನು ನೋಡಿ, ಅವರು ನಿಜಕ್ಕೂ ಒಳ್ಳೆಯ ವ್ಯಕ್ತಿ, ನನಗೆ ಬಿಲ್ ಕ್ಲಿಂಟನ್ ಎಂದರೆ ತುಂಬಾ ಇಷ್ಟ” ಎಂದಿದ್ದಾರೆ.
ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ತೂಕ ಹೊಂದಿದ್ದ ಮಾಜಿ ಅಧ್ಯಕ್ಷ ವಿಲಿಯಂ ಹಾವರ್ಡ್ ಟಾಫ್ಟ್ ಅವರ ಬೇಸ್‌ಬಾಲ್ ಮತ್ತು ಹಾಟ್‌ಡಾಗ್ ಪ್ರೇಮದ ಬಗ್ಗೆಯೂ ಟ್ರಂಪ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. “ಅವರ ದಾಖಲೆಯನ್ನು ನಾನೆಂದೂ ಮುರಿಯದಂತೆ ನಾನು ಜಾಗರೂಕನಾಗಿರಬೇಕು” ಎಂದು ಟ್ರಂಪ್ ರೇಗಿಸಿದ್ದಾರೆ.
ಸಾಮಾನ್ಯವಾಗಿ ರಾಜಕೀಯ ವೈರತ್ವ ಹೊಂದಿರುವ ಮಾಜಿ ಮತ್ತು ಹಾಲಿ ಅಧ್ಯಕ್ಷರೆಲ್ಲರೂ ಒಂದೆಡೆ ಸೇರಿ ಫುಟ್‌ಬಾಲ್ ಪಂದ್ಯ ವೀಕ್ಷಿಸುವ ಒಕ್ಕೂಟದ (Presidential Reunion) ಟ್ರಂಪ್ ಅವರ ಈ ಕಲ್ಪನೆ ಸದ್ಯ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.