ಕಲಬುರಗಿ: ವೈದ್ಯರಿಂದ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಇಬ್ಬರು ರೋಗಿಗಳು ಮೃತಪಟ್ಟಿರುವ ಘಟನೆ ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಆಸ್ಪತ್ರೆಯಲ್ಲಿ ನಡೆದಿದೆ. ರೋಗಿಗಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಭಾರತ್ ನಗರ ತಾಂಡಾ ನಿವಾಸಿ ಶಾರದಾಬಾಯಿ (65) ಹಾಗೂ ಉದನೂರ್ ತಾಂಡಾ ನಿವಾಸಿ ದಶರಥ ರಾಠೋಡ್ (50) ಮೃತ ರೋಗಿಗಳು.
ಶಾರದಾಬಾಯಿ ಅವರ ಪುತ್ರಿ ಈ ಬಗ್ಗೆ ಮಾತನಾಡಿ, ನಮ್ಮ ತಾಯಿ ವಿಪರೀತ ವಾಂತಿ ಭೇದಿಯಿಂದ ಬಳಲುತ್ತಿದ್ದರು. ಹೀಗಾಗಿ ಬುಧವಾರ ಜಿಮ್ಸ್‌ಗೆ ದಾಖಲಿಸಲಾಗಿತ್ತು. ಅಲ್ಲಿ ನರ್ಸ್ ಹೇಳಿದಂತೆ ರಕ್ತ ಪರೀಕ್ಷೆ, ಇತರ ತಪಾಸಣೆಗಳನ್ನು ಮಾಡಿಸಿ, 4 ಗಂಟೆ ವೇಳಗೆ ರಿಪೋರ್ಟ್ ತಂದು ಕೊಟ್ಟಿದ್ದೇವೆ. ಆದರೆ ಅದನ್ನು ವೈದ್ಯರು ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಅವರು ಮೊಬೈಲ್ ನೋಡುವುದರಲ್ಲೇ ನಿರತರಾಗಿದ್ದರು ಎಂದು ಆರೋಪಿಸಿದ್ದಾರೆ.
ಇನ್ನು ದಶರಥ ರಾಠೋಡ್ ಅವರ ಸಹೋದರ ಮಾತನಾಡಿ, ನನ್ನ ಅಣ್ಣ ಉಸಿರಾಟದ ಸಮಸ್ಯೆ ಹಿನ್ನೆಲೆ ಜಿಮ್ಸ್‌ಗೆ ದಾಖಲಿಸಿದ್ದೆವು. ಆಸ್ಪತ್ರೆಯಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಗಂಭೀರವಾಗಿದೆ ಎಂದು ಸಹಿ ತೆಗೆದುಕೊಂಡು, ಚಿಕಿತ್ಸೆ ಕೊಟ್ಟು ಹೋದವರು ಮತ್ತೆ ವಾಪಸ್ ಬರಲೇ ಇಲ್ಲ. ಉಸಿರಾಟದ ಸಮಸ್ಯೆ ಜಾಸ್ತಿಯಾಗಿ ಅಣ್ಣ ತೀವ್ರ ನಿಶಕ್ತರಾಗಿದ್ದರು. ಸಂಜೆಯವರೆಗೆ ಕಾದರೂ ವೈದ್ಯರು ಬರಲಿಲ್ಲ. ಕೊನೆಗೆ ಅವರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.