ಸಕ್ಕರೆ ನಾಡು ಮಂಡ್ಯದ ನಾಗಮಂಗಲದಲ್ಲಿ ಇಂದು ಪ್ರಜಾಧ್ವನಿ ಯಾತ್ರೆ ಮುಂದುವರೆದಿದೆ. ಯಾತ್ರೆ ವೇಳೆ ಡಿ.ಕೆ ಶಿವಕುಮಾರ್ ನಾನು ಒಕ್ಕಲಿಗರ ಮನೆ ಮಗ.. ನಿಮ್ಮ ಸೇವೆ ಮಾಡಲು ಒಂದು ಅವಕಾಶ ಕೊಡಿ ಎಂದು ಹೇಳುವ ಮೂಲಕ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ನಾನಿಂದು ಇಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ಬಂದಿದ್ದೇನೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ನಾವು ಮಾತು ಕೊಡುವುದಕ್ಕಿಂತ ಕೊಟ್ಟ ಮಾತಿನಂತೆ ನಡೆಯುವುದು ಮುಖ್ಯ. ಆ ಮೂಲಕ ಪ್ರಜಾಪ್ರಭುತ್ವದಲ್ಲಿ ಜನರ ವಿಶ್ವಾಸ ಗಳಿಸಿ ಕೆಲಸ ಮಾಡಬೇಕು ಎಂದ್ರು
ಚಲುವರಾಯಸ್ವಾಮಿ ಅವರು ತಮಗೆ ಅಕಾಶ ಸಿಕ್ಕಾಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಅವಕಾಶದಲ್ಲಿ ನಾವು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ನಾನು ದೇವೇಗೌಡರ ಕುಟುಂಬದ ವಿರುದ್ಧ ರಾಜಕೀಯವಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದರೂ ಪಕ್ಷ ಹೇಳಿದ ಕಾರಣಕ್ಕೆ ಎಲ್ಲ ರಾಜಕೀಯ ಭಿನ್ನಾಭಿಪ್ರಾಯ ಮರೆತು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಅವರಿಗೆ ಬೆನ್ನೆಲುಬಾಗಿ ನಿಂತೆ. ಮೈತ್ರಿ ಸರ್ಕಾರ ಇದ್ದಷ್ಟು ದಿನ ನಮ್ಮ ಪ್ರಾಮಾಣಿಕತೆಯಲ್ಲಿ ಕಿಂಚಿತ್ತೂ ಲೋಪ ಬಾರದಂತೆ ನಡೆದುಕೊಂಡಿದ್ದೇವೆ. ಇನ್ನು ದೇವೇಗೌಡರನ್ನು ದೇಶದ ಪ್ರಧಾನಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಇದೆಲ್ಲವೂ ಈಗ ಇತಿಹಾಸ. ಇತಿಹಾಸ ಮರೆತರೆ ಯಾರೂ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದ್ರು.
ನೀವು ಕುಮಾರಸ್ವಾಮಿ ಅವರನ್ನು 2 ಬಾರಿ ಸಿಎಂ ಮಾಡಿದ್ದೀರಿ, ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡಿದ್ದೀರಿ. ನಾನು ನಿಮ್ಮ ಮನೆ ಮಗನಾಗಿದ್ದು, ನನಗೂ ಒಂದು ಅವಕಾಶ ಮಾಡಿಕೊಡಿ. ನಾನು ಈ ಜಿಲ್ಲೆಯಲ್ಲಿ ಹುಟ್ಟಿಲ್ಲ, ಆದರೆ ನನ್ನ ಮಾವನವರು ಈ ತಾಲೂಕಿನವರು. ಈ ಕ್ಷೇತ್ರದಲ್ಲಿ ಕೇವಲ ಚಲುವರಾಯಸ್ವಾಮಿ ಮಾತ್ರವಲ್ಲ ಡಿ.ಕೆ. ಶಿವಕುಮಾರ್ ಅಭ್ಯರ್ಥಿ ಎಂದು ತಿಳಿದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಎಂದು ಒಕ್ಕಲಿಗ ಮತಗಳನ್ನು ಸೆಳೆಯುವ ಸಕಲ ಪ್ರಯತ್ನವನ್ನೂ ಮಾಡಿದ್ರು.