ಕೆಪಿಸಿಸಿ (KPCC) ಅಧ್ಯಕ್ಷರ ಬದಲಾವಣೆ ಆದರೆ ಡಿಸಿಎಂ ಡಿಕೆ ಶಿವಕುಮಾರ್ (Dk shivakumar) ಅವರನ್ನು ಮೂಲೆಗುಂಪು ಎಂಬ ವಿಚಾರದ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್ (Dk Suresh) ಪ್ರತಿಕ್ರಿಯಿಸಿದ್ದು, ಯಾರ್ ಯಾರ್ ಹಣೆಯಲ್ಲಿ ಏನು ಬರೆದಿದೆಯೋ ಅದು ಆಗುತ್ತದೆ, ನಾವೇನು ಮಾಡೋದಕ್ಕೆ ಆಗಲ್ಲ ಎಂದು ಹೇಳಿದರು.
ಈ ಬಗ್ಗೆ ಮಾತಾಡಿದ ಅವರು, ಯಾರ ಯಾರ ಹಣೆಯಲ್ಲಿ ಏನಾಗಬೇಕು ಎಂದು ಬರೆದಿರುತ್ತದೆಯೋ ಅದೇ ಆಗುತ್ತದೆ, ಅದಕ್ಕೆ ನಾವೇನು ಮಾಡೋದಕ್ಕೆ ಆಗಲ್ಲ, ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಬೇರೆ ಪಕ್ಷದಲ್ಲಿ ಇದ್ದರೂ, ಇದೀಗ ಕಾಂಗ್ರೆಸ್ ಗೆ ಬಂದ್ರು, ಸಿಎಂ ಆದ್ರು. ಅವರ ಹಣೆಯಲ್ಲಿ ಸಿಎಂ ಸ್ಥಾನ ಬರೆದಿತ್ತು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೇರೆ ಪಕ್ಷದಿಂದ ಬಂದ ರೇವಂತ್ ರೆಡ್ಡಿ ಅವರನ್ನು ನಮ್ಮ ಪಕ್ಷ ಸ್ವಾಗತಿಸಿತು, ಬಂದ ಮೂರೇ ವರ್ಷಕ್ಕೆ ಸಿಎಂ ಅದರೂ ಅದರಲ್ಲಿ ಏನಿದೆ, ಈಗ ಹರಿಯಾಣದಲ್ಲಿ ಗುಜರಾತ್ ನಲ್ಲಿ ಮೊದಲ ಬಾರಿ ಎಂಎಲ್ಎಗಳೇ ಸಿಎಂ ಆಗಿದ್ದಾರೆ, ರಾಜಕಾರಣದಲ್ಲಿ ಯಾವುದೂ ಸಾಧ್ಯವಾಗದ್ದಿಲ್ಲ, ಅಸಾಧ್ಯವೂ ಇಲ್ಲ ಎಂದು ಡಿಕೆ ಸುರೇಶ್ ತಿಳಿಸಿದ್ದಾರೆ.
ಯಾರೇ ಆಗಲಿ ಜನರಿಗೆ ಮಾತು ಕೊಟ್ಟ ಮೇಲೆ ಅದರಂತೆ ನಡೆದುಕೊಳ್ಳಬೇಕಾಗಿದ್ದು ಆಡಳಿತ ನಡೆಸುವವರ ಕರ್ತವ್ಯ, ಒಂದು ಪಕ್ಷವಾಗಿ ಕೂಡ ಆ ಕೆಲಸ ಮಾಡಬೇಕು. ಡಿಕೆ ಶಿವಕುಮಾರ್ ಸಿಎಂ ಯಾವಾಗ ಆಗುತ್ತಾರೆ ಎಂಬುದು ನಮ್ಮ ನಿಮ್ಮ ನಡುವೆ ಆಗುವ ಚರ್ಚೆ ಅಲ್ಲ..
ಅದು ಪಕ್ಷದ ವರಿಷ್ಟರ ತೀರ್ಮಾನ ಮಾಡಬೇಕು ಸದ್ಯ ಸಿಎಂ ಹುದ್ದೆ ಖಾಲಿಯಿಲ್ಲ, ಸಿದ್ದರಾಮಯ್ಯ ಪಕ್ಷದ ಶಾಸಕರ ಬೆಂಬಲದಿಂದ ಆಡಳಿತ ನಡೆಸುತ್ತಿದ್ದಾರೆ. ಏನೇ ತೀರ್ಮಾನ ಮಾಡುವುದಾದರೂ ವರಿಷ್ಟರು ತೀರ್ಮಾನ ಮಾಡಬೇಕೇ ಹೊರತು ವೈಯಕ್ತಿಕ ತೀರ್ಮಾನ ಇಲ್ಲಿಲ್ಲ ಎಂದು ಡಿಕೆ ಸುರೇಶ್ ಹೇಳಿದರು.
ಶ್ರಮಕ್ಕೆ ಫ್ರತಿಫಲ ಖಂಡಿತವಾಗಿ ಇದೆ, ಅದಕ್ಕೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು, ಒಂದಲ್ಲ ಒಂದು ದಿನ ಡಿಕೆ ಶಿವಕುಮಾರ್ ಶ್ರಮಕ್ಕೆ ಪ್ರತಿಫಲ ಸಿಕ್ಕೆ ಸಿಗುತ್ತದೆ. ಅಲ್ಲಿ ತನಕ ಕಾಯಬೇಕು, ಭರವಸೆ ಮೇಲೆಯೇ ನಾವೆಲ್ಲ ಬದುಕುತ್ತಾ ಇರುವುದು ಹೀಗಾಗಿ ಕಾಯೋಣ ಎಂದರು.
ಎಲ್ಲರೂ ಕೂಡ ನಂಬಿಕೆ ಮೇಲೆಯೇ ಇರುವುದು ನನಗೇನಾದರೂ ಒಳ್ಳೆಯದಾಗತ್ತೆ ಎಂದೇ ನೀವೂ ಕೆಲಸ ಮಾಡ್ತಿರೋದು, ವಚನ ಭ್ರಷ್ಟತೆಯ ಬಗ್ಗೆ ಹೈಕಮಾಂಡ್ ಅನ್ನು ಕೇಳಬೇಕು. ನಾನು ಹೈಕಮಾಂಡ್ ಭೇಟಿ ಮಾಡಿದ್ದು ರಾಜಕೀಯ ಕಾರಣಕ್ಕಲ್ಲ ಬದಲಿಗೆ ನ್ಯಾಯಾಲಯದ ಕೇಸ್ ಸಲುವಾಗಿ ನಾನು ದೆಹಲಿಗೆ ಹೋಗಿದ್ದು, ಸಿಎಂ ನಮಗೇನು ಹೊಸಬರಲ್ಲ, ಅವರ ಹತ್ರ ಮಾತಾಡೋಕೆ ಆತಂಕ ಯಾಕೆ ಎಂದು ಡಿಕೆ ಸುರೇಶ್ ತಿಳಿಸಿದರು.
ಅಧಿಕಾರ ಹಂಚಿಕೆ ಬಗ್ಗೆ ನಾನು ಮಾತಾಡೋಕೆ ಆಗಲ್ಲ, ನಾನು ಎಲ್ಲದಕ್ಕೂ ಸಾಕ್ಷಿಯೇ, ನಾನು ಕೂಡ ಕಾಂಗ್ರೆಸ್ ಕಾರ್ಯಕರ್ತನೇ.. ಈ ಬಗ್ಗೆ ದೆಹಲಿಯಲ್ಲಿ ಎರಡೂ ವರೆ ವರ್ಷದ ಹಿಂದೆ ಏನು ತೀರ್ಮಾನ ಆಗಿತ್ತಾ ಎಂಬ ಕುತೂಹಲ ಇತ್ತು, ನಾಲ್ಕು ಗೋಡೆಯ ಮಧ್ಯೆ ನಡೆದ ತೀರ್ಮಾನ ಅದು, ವರಿಷ್ಟರು ಮಾಡಿದ ತೀರ್ಮಾನ ಏನೇ ನಿರ್ಧಾರ ಕೈಗೊಂಡರು ಸರಿಯಾಗಿ ಇರುತ್ತದೆ ಎಂದರು.
ಅಧಿಕಾರ ಹಂಚಿಕೆ ಬಗ್ಗೆ ನನ್ನ ಬಳಿ ಅಥವಾ ಇನ್ನೋಬರ ಬಳಿ ಕೇಳುವ ಬದಲು ವರಿಷ್ಟರಿಗೆ ಕೇಳಬೇಕು, ವರಿಷ್ಟರನ್ನು ಹುಡುಕಿ, ನಿಮ್ಮ ಕೈಗೆ ಸಿಕ್ಕೇ ಸಿಗುತ್ತಾರೆ, ಆಗ ಇದರ ಬಗ್ಗೆ ಹೈಕಮಾಂಡ್ ಸ್ಪಷ್ಟತೆ ಕೊಟ್ಟೆ ಕೊಡುತ್ತಾರೆ. ಈಗಾಗಲೇ ನೀವು ಪ್ರಸಾರ ಮಾಡುತ್ತಿರುವ ಎಲ್ಲ ವಿಚಾರವನ್ನೂ ವರಿಷ್ಟರು ಗಮನಿಸುತ್ತಿದ್ದಾರೆ..
ನನಗೆ ಆಸೆ ಇದೆ, ಆದರೆ ಮನವಿ ಏನಿಲ್ಲ ಎಲ್ಲಿಯವರೆಗೆ ಡಿಕೆ ಶಿವಕುಮಾರ್ ಅಧ್ಯಕ್ಷರಾಗಿ ಇರುತ್ತಾರೋ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯುತ್ತದೆ. ಯಾರೇ ಅಧ್ಯಕ್ಷರಾಗಿ ಕೆಲಸ ಮಾಡಿದರೂ ಅವರಿಗೆ ಡಿಕೆ ಶಿವಕುಮಾರ್ ಸಹಕಾರ ಕೊಡುತ್ತಾರೆ, ರಿಸೈನ್ ಮಾಡಲ್ಲ ಕೆಪಿಸಿಸಿಗೆ ಅಂತ ಡಿಕೆಶಿ ನಿಮ್ಮ ಹತ್ರ ಏನೂ ಹೇಳಿಲ್ವಲ್ಲ ಎಂದು ಡಿಕೆ ಸುರೇಶ್ ಪ್ರಶ್ನಿಸಿದರು.
ಪಕ್ಷದ ಕೆಲಸವನ್ನು ಡಿಕೆ ಶಿವಕುಮಾರ್ ಏನೆಲ್ಲ ಮಾಡಬೇಕೋ ಮಾಡಿದ್ದಾರೆ, ಕೆಲವರು ಕಾರ್ಯಕರ್ತರ ಉತ್ಸಾಹ ಕುಗ್ಗಿಸುವ ಮಾತನಾಡುತ್ತಿರುತ್ತಾರೆ. ಕಾರ್ಯಕರ್ತರಿಗೆ ಆತ್ಮ ಸ್ಥೈರ್ಯ ತುಂಬುವುದು ಪಕ್ಷದ ಅಧ್ಯಕ್ಷರ ಜವಾಬ್ದಾರಿ ಅಷ್ಟೇ. ಹಾಗಂತ ಏನೋ ದಾಖಲೆ ಅವಧಿ ಮಾಡಬೇಕು ಎಂಬುದಲ್ಲ, ಅವರಿಗೆ ಆ ಕನಸು ಕೂಡ ಇಲ್ಲ ಎಂದು ಹೇಳಿದರು.
ನಾವು ರಾಜಕಾರಣದಲ್ಲಿ ಶಾಶ್ವತವಾಗಿ ಇರಬೇಕು ಅಂತಂದ್ರೆ ಯಾರಿಗೇ ಆದ್ರೂ ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು, ಕೊಟ್ಟ ಮಾತಿನಂತೆ ನಡೆಯುವುದು ಮುಖ್ಯ ಆಗುತ್ತದೆ, ಆಗ ಮಾತ್ರ ಅವರು ರಾಜಕಾರಣದಲ್ಲಿ ಶಾಶ್ವತವಾಗಿ ಇರುತ್ತಾರೆ ಎಂದು ತಮ್ಮದೇ ಪಕ್ಷದವರ ವಿರುದ್ಧ ಹರಿಹಾಯ್ದರು.
ಸಾಮಾನ್ಯವಾಗಿ ಸಿಎಂ ಸಿದ್ದರಾಮಯ್ಯ ಅವರು ಯಾರಿಗೆ ಆಗಲಿ ಕೊಟ್ಟ ಮಾತು ತಪ್ಪುವವರಲ್ಲ, ಕರ್ನಾಟಕದ ಜನರಿಗೆ ಕಳೆದ ಐದು ವರ್ಷಗಳ ಹಿಂದೆ ಏನೇನು ಭರವಸೆ ಕೊಟ್ಟಿದ್ರು ಅದೆಲ್ಲ ಭರವಸೆ ಸಿದ್ದರಾಮಯ್ಯ ಈಡೇರಿಸಿದ್ದಾರೆ.. ಈಗಲೂ ಕೂಡ ಯಾರೆಲ್ಲಾ ಯಾರಿಗೆ ಏನೇನು ಮಾತು ಕೊಟ್ಟಿದ್ದಾರೆ ಆ ಮಾತಿನಂತೆ ಸಿದ್ದರಾಮಯ್ಯ ನಡೆಯುತ್ತಿದ್ದಾರೆ ಎಂದು ಡಿಕೆ ಮಾರ್ಮಿಕವಾಗಿ ಉತ್ತರಿಸಿದರು.
ಸಿದ್ದರಾಮಯ್ಯ ಖಂಡಿತವಾಗಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಅದರಲ್ಲಿ ತಪ್ಪೇನಿದೆ, ನಾನು ಯಾವತ್ತೂ ಆಶಾದಾಯಕವಾಗಿ ಇರುವವನು, ನಾನು ಮುಂದೆ ನೋಡುವವನೇ ಹೊರತು ಹಿಂದೆ ನೋಡುವವನಲ್ಲ ಎದು ಡಿಕೆ ಸುರೇಶ್ ತಿಳಿಸಿದರು.
ಇವತ್ತಿಗೆ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದೆ, ಸಿಎಂ ಸಿದ್ಧರಾಮಯ್ಯ ಅವರು ಕೊಟ್ಟ ಮಾತಿನಂತೆ ಗ್ಯಾರಂಟಿ ಕೊಟ್ಟಿದ್ದಾರೆ, ಅವರು ಏನು ಮಾತು ಕೊಡ್ತಾರೆ ಅದರ ಪ್ರಕಾರ ನಡೆದುಕೊಳ್ತಾರೆ, ಪಕ್ಷದ ವರಿಷ್ಟರು ಸಿಎಂ ಹಾಗೂ ಡಿಸಿಎಂ ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಎಲ್ಲರಿಗೂ ಡಿಕೆಶಿ ಸಿಎಂ ಆಗಲಿ ಎಂಬ ಆಸೆ ಇದೆ, ಅವರವರ ಅಭಿಮಾನಿಗಳು ಪೂಜೆ ಹರಕೆ ಎಲ್ಲ ಮಾಡುತ್ತಿದ್ದಾರೆ, ಡಿಕೆಶಿವಕುಮಾರ್ ಅವರು ಬೇರೆ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವವರು ನೋಡೋಣ ಏನಾಗುತ್ತದೆ ಎಂದು ಡಿಕೆ ಸುರೇಶ್ ಮಾರ್ಮಿಕವಾಗಿ ಉತ್ತರಿಸಿದರು.
ಡಿಕೆ ಮೊದಲಿನಿಂದಲೂ ಪಕ್ಷ ಏನು ಆದೇಶ ಕೊಡುತ್ತೋ ಅದರ ಪ್ರಕಾರ ನಡೆಯುತ್ತಾರೆ, ಸಿಎಂ ಆಗ್ಲಿ ಡಿಸಿಎಂ ಆಗ್ಲಿ ಎಲ್ಲರೂ ಹೈಕಮಾಂಡ್ ಆದೇಶ ಪಾಲನೆ ಮಾಡುತ್ತಾರೆ, ಸದ್ಯ ಡಿಕೆಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಬೇರೆ ಯಾರನ್ನಾದರೂ ಹೈಕಮಾಂಡ್ ತೀರ್ಮಾನಿಸಿದರೆ ಅವರಿಗೂ ಸಹಕಾರ ಕೊಡುತ್ತಾರೆ ಎಂದು ಡಿಕೆಸು ವ್ಯಂಗ್ಯವಾಡಿದರು.