ರಾಮನಗರ: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಗಾಗಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಕಳುಹಿಸಲಾಗಿದೆ. ಇನ್ನೆರೆಡು ದಿನದಲ್ಲಿ ಅಭ್ಯರ್ಥಿ ಆಯ್ಕೆ ಫೈನಲ್ ಆಗಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಸೋಮವಾರ ರಾಮನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಯಾವುದೇ ಅಚ್ಚರಿಯ ಅಭ್ಯರ್ಥಿ ಸ್ಪರ್ಧಿಸುವುದಿಲ್ಲ. ನಮ್ಮದೇ ಜಿಲ್ಲೆಯ ನಮ್ಮದೇ ತಾಲೂಕಿನ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ ಎಂದರು. ಈ ಮೂಲಕ ರಮ್ಯ, ಯೋಗೀಶ್ವರ್ ಇತ್ಯಾದಿ ಊಹಾಪೋಹಗಳಿಗೆ ಡಿ.ಕೆ.ಸುರೇಶ್ ತೆರೆಯೆಳೆದಿದ್ದಾರೆ. ಚನ್ನಪಟ್ಟಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ಗೆ ಟಿಕೆಟ್ ನೀಡುವ ಸುಳಿವನ್ನೂ ಸಹ ಡಿ.ಕೆ.ಸುರೇಶ್ ನೀಡಿದ್ದಾರೆನ್ನಲಾಗಿದೆ.
ಕಾಂಗ್ರೆಸ್ ಪಕ್ಷದಿಂದ 15 ಮಂದಿ ಜೆಡಿಎಸ್ ಸೇರಲಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಕುಮಾರಸ್ವಾಮಿಯವರು ನನಗಿಂತ ಹೆಚ್ಚು ತಿಳುವಳಿಕೆಯುಳ್ಳವರು. ಅವರ ಪ್ರಕಾರ ಹೋದರೂ ಹೋಗಬಹುದು. ಯಾರಿಗೆ ಗೊತ್ತು ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಸಚಿವ ಮುನಿರತ್ನ ವಿರುದ್ಧ ನೀಡಿರುವ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಅವರ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಅವರು ಎಲ್ಲರೂ ತನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಭ್ರಮೆಯಲ್ಲಿದ್ದಾರೆ. ಆ ಭ್ರಮೆಯಿಂದ ಹೊರಬಂದರೆ ಎಲ್ಲವೂ ಸರಿಹೋಗುತ್ತದೆ ಎಂದರು.
ರಾಜ್ಯರಾಜಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರವೇಶದ ಕುರಿತು ಮಾತನಾಡಿ, ಅವರು ನಮ್ಮೆಲ್ಲರ ಪರಮೋಚ್ಛ ನಾಯಕರು. ಅವರು ರಾಜ್ಯರಾಜಕಾರಣಕ್ಕೆ ಬರಬಾರದು ಎಂದೇನೂ ಇಲ್ಲ. ಅವರು ಏನು ಆದೇಶ ಮಾಡುತ್ತಾರೋ ನಾನು ಮತ್ತು ಡಿ.ಕೆ.ಶಿವಕುಮಾರ್ ಎಲ್ಲರೂ ಪಾಲಿಸುತ್ತೇವೆ ಎಂದರು.