ವಿಜಯಪುರ: ರಾಜ್ಯದಲ್ಲಿ ಸಿಎಂ ಕುರ್ಚಿ ಪ್ರಹಸನ (CM Change row) ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಮಧ್ಯೆ ವಿಜಯಪುರದಲ್ಲಿ (Vijayapura) ಡಿಕೆಶಿ (DK Shivakumar) ಆಡಿದ ಮಾತುಗಳು ತೀವ್ರ ಚರ್ಚೆ ಹುಟ್ಟುಹಾಕಿದೆ. ಒಂದು ಮರಕ್ಕೆ ಬೇರು ಎಷ್ಟು ಮುಖ್ಯವೋ,ಹಾಗೇ ಒಬ್ಬ ಮನುಷ್ಯನಿಗೆ ನಂಬಿಕೆ ಕೂಡ ಬಹಳ ಮುಖ್ಯ. ದೇವರು ನಮಗೆ ಎರಡು ಆಯ್ಕೆ ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು’ ಎಂದು ಡಿಕೆ ಮಾರ್ಮಿಕವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ : ಗೃಹ ಖಾತೆ ಬಗ್ಗೆ ಡಿಸಿಎಂ ಡಿಕೆಶಿ ವಿರುದ್ಧ ಹೆಚ್‌ಡಿಕೆ ಗಂಭೀರ ಆರೋಪ
ಇಂದು (ಜ.9) ವಿಜಯಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದರು. ಈ ವೇಳೆ ಡಿಕೆ ಶಿವಕುಮಾರ್ ಆಡಿದ ಈ ಮಾತುಗಳು ಪರೋಕ್ಷವಾಗಿ ಸಿಎಂ ಕುರ್ಚಿ ವಿಚಾರವಾಗಿ ಸಿದ್ದರಾಮಯ್ಯನವರಿಗೆ ಹೇಳಿದಂತಿತ್ತು.
ಇತ್ತೀಚೆಗಷ್ಟೆ ದೇವರಾಜು ಅರಸು ಅವರ ದಾಖಲೆ ಮುರಿದು ಸುದೀರ್ಘ ಆಡಳಿತ ನಡೆಸಿರುವ ಸಿಎಂ ಸಿದ್ದರಾಮಯ್ಯ, ಸಂಕ್ರಾಂತಿಯ ನಂತರ ಕುರ್ಚಿ ಬಿಟ್ಟು ಕೊಡ್ತಾರಾ ಎಂಬ ಚರ್ಚೆಯ ನಡುವೆ ಡಿಕೆ ಈ ಮಾತುಗಳನ್ನಾಡಿದ್ದು, ಬುದ್ಧಿ ಇದ್ದವರು ಯುದ್ಧ ಗೆಲ್ಲುತ್ತಾರೆ. ಗುಣ ಇದ್ದವರು ಹೃದಯವನ್ನು ಗೆಲ್ಲುತ್ತಾರೆ. ತಾಳ್ಮೆ ಇದ್ದವರು ಜಗತ್ತನ್ನೇ ಗೆಲ್ಲುತ್ತಾರೆ ಎಂದು ಡಿಕೆಶಿ ಪಂಚಿಂಗ್ ಲೈನ್ ಹೇಳಿದ್ದಾರೆ.
ಈ ಹಿಂದೆಯೂ ಕೂಡ ಹಲವು ಬಾರಿ, ಸಾಕಷ್ಟು ವೇದಿಕೆಗಳಲ್ಲಿ ಮಾತನಾಡುವ ವೇಳೆ ಡಿಕೆ ಶಿವಕುಮಾರ್ಪರೋಕ್ಷವಾಗಿ ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡಿದ್ದಾರೆ. ಹೀಗೆ ಸಾಕಷ್ಟು ಸಂದರ್ಭದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ನಂಬಿಕೆಯನ್ನು ಕಳೆದುಕೊಳ್ಳಬಾರದು ಎಂಬೆಲ್ಲಾ ಮಾತುಗಳನ್ನು ಆಡಿದ್ದರು. ಇದೀಗ ವಿಜಯಪುರದಲ್ಲಿ ಮತ್ತೆ ಅದೇ ರೀತಿ ಸಾಲುಗಳನ್ನು ಡಿಕೆ ಪುನರುಚ್ಚರಿಸಿದ್ದಾರೆ.