ವಿಜಯಪುರ : ‘ಸತೀಶ್ ಜಾರಕಿಹೊಳಿ ಮುಂದಿನ ಸಿಎಂ’ ಎಂಬರ್ಥದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಾತಾಡಿದ ವಿಚಾರ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಆದರೆ, ‘ಯಾವುದೇ ಕಾರಣಕ್ಕೂ ಡಿಕೆಶಿ ಸಿಎಂ ಮಾಡಲು ಬಿಡುವುದಿಲ್ಲ. ಹಾಗಂತ ಡಿಕೆಶಿ (DK Shivakumar) ಸುಮ್ಮನೇ ಕೂರುವ ಹುಳ ಅಲ್ಲ’ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ.
ವಿಜಯಪುರದಲ್ಲಿ ಮಾತಾಡಿದ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ, ‘ಕಾಂಗ್ರೆಸ್ ಅಪ್ಪ ಅಮ್ಮ ಇಲ್ಲದ ಪಕ್ಷ. ಡಿಕೆಶಿ ಒಪ್ಪಂದ ಮಾಡಿಕೊಂಡಿದ್ದೇವೆ ಅಂತಾರೆ. ಯಾರಾದ್ರೂ ಸಿಎಂ ವಿಚಾರ ಮಾತನಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ ಅಂತಾರೆ. ಆದರೆ, ಸಿದ್ದರಾಮಯ್ಯ ನಾನೇ ನಾನು 5 ವರ್ಷದ ಸಿಎಂ ಅಂತಾರೆ. ಈಗ ಸಿಎಂ ಮಗ ಹೇಳ್ತಾರೆ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಅಂತ’ ಎಂದು ವ್ಯಂಗ್ಯವಾಡಿದ್ದಾರೆ.
‘ಯತೀಂದ್ರ ಸಿದ್ದರಾಮಯ್ಯ ಮೇಲೆ ಕ್ರಮ ಕೈಗೊಳ್ಳಲು ತಾಕತ್ತಿಲ್ವಾ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ’ ಎಂದು ಈಶ್ವರಪ್ಪ ಹೇಳಿದ್ದಾರೆ.
‘ಯಾವುದೇ ಕಾರಣಕ್ಕೂ ಇವರು ಡಿ.ಕೆ ಶಿವಕುಮಾರ್ರನ್ನ ಸಿಎಂ ಮಾಡಲು ಬಿಡುವುದಿಲ್ಲ. ಹಾಗಂತ ಡಿಕೆಶಿ ಕೂಡ ಸುಮ್ಮನೆ ಕೂಡುವ ಹುಳ ಅಲ್ಲ. ಆದ್ದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರೋದು ನಿಶ್ಚಿತ. ಅದಾದ ನಂತರ ಚುನಾವಣೆ ಬರುತ್ತೆ’ ಎಂದು ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.