ಕರ್ನಾಟಕದ (Karnataka) ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (Dk Shivakumar) ಅವರು ಇಂದು ಪ್ರಮಾಣವಚನ (Oath) ಸ್ವೀಕರಿಸಲಿದ್ದು, ಇಡೀ ರಾಜ್ಯದ ಕಣ್ಣು ಈ ಭರ್ಜರಿ ಪದಗ್ರಹಣ ಕಾರ್ಯಕ್ರಮದ ಮೇಲೆ ನೆಟ್ಟಿದೆ.
ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆಗಿನ ಸುದೀರ್ಘ ಚರ್ಚೆ ಮುಗಿಸಿ ನಿನ್ನೆ ರಾತ್ರಿ ಬೆಂಗಳೂರಿಗೆ ಮರಳಿದ ಡಿ.ಕೆ. ಶಿವಕುಮಾರ್, ವಿಮಾನ ನಿಲ್ದಾಣದಿಂದ ನೇರವಾಗಿ ರಾಜಭವನಕ್ಕಾಗಲಿ ಅಥವಾ ತಮ್ಮ ನಿವಾಸಕ್ಕಾಗಲಿ ಹೋಗದೆ ತಡರಾತ್ರಿಯೇ ನಾಗರಬಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ (Ajjayya Mutt) aಭೇಟಿ ನೀಡಿರುವುದು ಭಾರಿ ಕುತೂಹಲ ಮೂಡಿಸಿದೆ.
ಪತ್ನಿ ಸಮೇತ ಅಜ್ಜಯ್ಯನ ಮಠದಲ್ಲಿ ತಡರಾತ್ರಿ 2 ಗಂಟೆಗಳ ಕಾಲ ಸುದೀರ್ಘ ಚರ್ಚೆ
ತಮ್ಮ ಆರಾಧ್ಯ ದೈವವಾಗಿರುವ ಅಜ್ಜಯ್ಯನ ಆಶೀರ್ವಾದ ಪಡೆಯಲು ಡಿ.ಕೆ. ಶಿವಕುಮಾರ್ ಅವರು ಪತ್ನಿ ಸಮೇತರಾಗಿ ಮಠಕ್ಕೆ ಆಗಮಿಸಿದ್ದರು. ರಾತ್ರಿ 11.40ಕ್ಕೆ ಮಠಕ್ಕೆ ಬಂದ ಅವರು, ತಡರಾತ್ರಿ 2 ಗಂಟೆಯವರೆಗೂ ಅಂದರೆ ಸುಮಾರು 2 ಗಂಟೆ 20 ನಿಮಿಷಗಳ ಕಾಲ ಅಲ್ಲೇ ಇದ್ದು ಅಜ್ಜಯ್ಯರ ಜೊತೆ ಸುದೀರ್ಘ ಹಾಗೂ ರಹಸ್ಯ ಚರ್ಚೆ ನಡೆಸಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ಪದಗ್ರಹಣ, ನೂತನ ಸಂಪುಟ ರಚನೆ ಹಾಗೂ ಈ ಕುರಿತು ದೆಹಲಿಯಲ್ಲಿ ಹೈಕಮಾಂಡ್ ಜೊತೆ ನಡೆದ ಮಾತುಕತೆಗಳ ಸಂಪೂರ್ಣ ವಿವರವನ್ನು ಅವರು ಅಜ್ಜಯ್ಯನ ಮುಂದೆ ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ರಾಜಭವನದಲ್ಲಿ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಸ್ವತಃ ಅಜ್ಜಯ್ಯ ಅವರೇ ಮುಹೂರ್ತ ನಿಗದಿಪಡಿಸಿದ್ದಾರೆ. ಹೀಗಾಗಿ ಪದಗ್ರಹಣದ ನಿಖರ ಸಮಯ, ಆ ವೇಳೆಯ ಶುಭಯೋಗಗಳು ಹಾಗೂ ಅದರಿಂದ ಸಿಗಲಿರುವ ಶುಭಫಲಗಳ ಬಗ್ಗೆಯೂ ಡಿ.ಕೆ. ಶಿವಕುಮಾರ್ ಅವರು ಅಜ್ಜಯ್ಯನ ಜೊತೆ ಜ್ಯೋತಿಷ್ಯದ ಹಿನ್ನೆಲೆಯಲ್ಲಿ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಡಿಕೆಶಿ ಜೊತೆಗೆ ಅವರ ಸಹೋದರ ಡಿ.ಕೆ. ಸುರೇಶ್ ಹಾಗೂ ಶಾಸಕ ಟಿ.ಡಿ. ರಾಜೇಗೌಡ ಕೂಡ ಉಪಸ್ಥಿತರಿದ್ದರು. ಇನ್ನು ಅಣ್ಣನ ಈ ಮಹತ್ವದ ಪದಗ್ರಹಣ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಡಿ.ಕೆ. ಸುರೇಶ್ ಅವರೇ ಹೆಗಲಿಗೇರಿಸಿಕೊಂಡು ಮುನ್ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ 10ಕ್ಕೆ ಅಂತಿಮ ಪಟ್ಟಿ: ಡಿಕೆಶಿ
ಬೆಂಗಳೂರಿಗೆ ಬರುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಸಿಎಂ ಡಿ.ಕೆ. ಶಿವಕುಮಾರ್, ಸಚಿವ ಸ್ಥಾನ ಹಂಚಿಕೆ ಹಾಗೂ ಸಚಿವರ ಪಟ್ಟಿ ಕುರಿತು ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. “ಸದ್ಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸಚಿವರ ಹೆಸರುಗಳು ಅಧಿಕೃತವಲ್ಲ. ನಾವೆಲ್ಲಾ ಒಟ್ಟಾಗಿ ಕುಳಿತು ತೀರ್ಮಾನ ಮಾಡಿ, ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ತಿಳಿಸಿ ಬಂದಿದ್ದೇವೆ. ಇಂದು ಬೆಳಗ್ಗೆ 10 ಗಂಟೆಗೆ ಹೈಕಮಾಂಡ್ ಕಡೆಯಿಂದ ಫೈನಲ್ ಲಿಸ್ಟ್ ನಮಗೆ ಬರಲಿದೆ” ಎಂದು ಅವರು ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ನಾವು ಹೈಕಮಾಂಡ್ ಜೊತೆ ವಿವರವಾಗಿ ಚರ್ಚೆ ನಡೆಸಿ ನಮ್ಮ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ. ವರಿಷ್ಠರು ಯಾರ ಹೆಸರನ್ನು ಅಂತಿಮಗೊಳಿಸುತ್ತಾರೋ ಅದು ಇಂದು ಬೆಳಗ್ಗೆ ತಿಳಿಯಲಿದೆ. ಲಿಸ್ಟ್ ಬಂದ ತಕ್ಷಣವೇ ಅದನ್ನು ನಾವು ಲೋಕಭವನಕ್ಕೆ ಕಳುಹಿಸಿಕೊಡಲಿದ್ದೇವೆ.
ನಾವು ಯಾರ್ಯಾರಿಗೆ ಆಮಂತ್ರಣ ನೀಡಿದ್ದೇವೆಯೋ ಅವರೆಲ್ಲರೂ ಲೋಕಭವನದ ಕಾರ್ಯಕ್ರಮದಲ್ಲಿ ಸಿಗಲಿದ್ದಾರೆ. ಪ್ರಮಾಣವಚನ ಸ್ವೀಕಾರ ಮುಗಿದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಹೋಗಲಿದ್ದೇವೆ” ಎಂದು ಡಿ.ಕೆ. ಶಿವಕುಮಾರ್ ತಮ್ಮ ಇಡೀ ದಿನದ ಯೋಜನೆಯನ್ನು ಬಿಚ್ಚಿಟ್ಟಿದ್ದಾರೆ.