ಬೆಂಗಳೂರು : ನೋಡ್ರಪ್ಪ.. ಸುಗಂಧರಾಜ (Sugandharaja Tuberose) ಹೂವಿನ ಹಾರ ಮಾತ್ರ ಹಾಕಬೇಡಿ! ಇದು ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಆಗಾಗ್ಗೆ ಅಭಿಮಾನಿಗಳು ಹಾಗು ಕಾರ್ಯಕರ್ತರಿಗೆ ಹೇಳುವ ಮಾತು.
ಡಿಕೆಶಿ ಯಾಕೆ ಈ ಹೂವಿನ ಹಾರ ಬೇಡ ಅಂತಾರೆ? ಅದರಿಂದ ಅವರಿಗೆ ಏನು ಸಮಸ್ಯೆ ಅನ್ನೋದರ ಹಿಂದಿದೆ ವೈಜ್ಞಾನಿಕ ಕಾರಣ.
ತನ್ನ ಅದ್ಭುತ ಸುಗಂಧದಿಂದಲೇ ಎಲ್ಲರನ್ನೂ ಕೈಬೀಸಿ ಕರೆಯುವ ಈ ಹೂವು, ಕೆಲವರ ಚರ್ಮಕ್ಕೆ ಮಾತ್ರ ಅಕ್ಷರಶಃ ವಿಲನ್.ಹೌದು, ಸುಗಂಧರಾಜ ಹೂವನ್ನು ಮುಟ್ಟಿದ ತಕ್ಷಣ ಅಥವಾ ಹೂವಿನ ಹಾರ ಧರಿಸಿದ ಕೆಲವೇ ಹೊತ್ತಿನಲ್ಲಿ ಚರ್ಮ ತುರಿಸುವುದು, ಕೆಂಪಗಾಗುವುದು, ಉರಿ ಅಥವಾ ಸಣ್ಣ ಸಣ್ಣ ದದ್ದುಗಳು ಏಳುವ ಸಮಸ್ಯೆ ಎದುರಾಗಿತ್ತೆ.
ಹಲವರ ಪಾಲಿನ ವಿಲನ್ ಈ ಸುಗಂಧರಾಜ ಹೂ!
ಕೆಲವರಿಗೆ ಸುಗಂಧರಾಜ ಹೂವಿನಲ್ಲಿರುವ ಸಂಕೀರ್ಣ ರಾಸಾಯನಿಕ ತೈಲಗಳು ನೇರವಾಗಿ ಚರ್ಮಕ್ಕೆ ಸೋಕಿದಾಗ ಮೇಲೆ ಉರಿ ಮತ್ತು ನವೆಗೆ ಕಾರಣವಾಗಿ ಇರಿಟೆಂಟ್ ಕಾಂಟ್ಯಾಕ್ಟ್ ಡರ್ಮಟೈಟಿಸ್ ಉಂಟು ಮಾಡಿದರೆ, ಇನ್ನು ಕೆಲವರಲ್ಲಿ ದೇಹದಲ್ಲಿನ ರೋಗನಿರೋಧಕ ಶಕ್ತಿ (Immune System) ಈ ಹೂವಿನಲ್ಲಿರುವ ಸುಗಂಧದ ಕಣಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿ ತಕ್ಷಣ ಅಲ್ಲದಿದ್ದರೂ, 12 ರಿಂದ 48 ಗಂಟೆಗಳ ನಂತರ ನಿಧಾನವಾಗಿ ಚರ್ಮದ ಮೇಲೆ ತೀವ್ರವಾದ ತುರಿಕೆ, ಊತ ಮತ್ತು ಸಣ್ಣ ಸಣ್ಣ ನೀರೊಡ್ಡೆಗಳು (Blisters) ಕಾಣಿಸಿಕೊಳ್ಳುತ್ತವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಟೈಪ್ IV ಹೈಪರ್ ಸೆನ್ಸಿಟಿವಿಟಿ’ ಎಂದು ಕರೆಯಲಾಗುತ್ತದೆ.
ಹೂವಿನಲ್ಲಿರುವ ಆ ಅಸಲಿ ‘ಅಲರ್ಜನ್’ ಯಾವುದು?
ವಿಜ್ಞಾನಿಗಳ ಪ್ರಕಾರ, ಸುಗಂಧರಾಜ ಹೂವಿನಲ್ಲಿ ಚರ್ಮದ ಅಲರ್ಜಿಗೆ ಕಾರಣವಾಗುವ ಹಲವು ರಾಸಾಯನಿಕ ಕಣಗಳು ನೈಸರ್ಗಿಕವಾಗಿಯೇ ಈ ಹೂವಿನಲ್ಲಿ ಅಡಗಿವೆ.
1. ಬೆಂಜೈಲ್ ಸ್ಯಾಲಿಸಿಲೇಟ್ (Benzyl Salicylate)
ಸುಗಂಧರಾಜ ಹೂವಿಗೆ ಆ ಅದ್ಭುತವಾದ ಸಿಹಿ ಮತ್ತು ಆಕರ್ಷಕ ಫ್ಲೋರಲ್ ಪರಿಮಳವನ್ನು ನೀಡುವುದೇ ಈ ಬೆಂಜೈಲ್ ಸ್ಯಾಲಿಸಿಲೇಟ್. ಇದು ಅತ್ಯಂತ ಶಕ್ತಿಶಾಲಿ ಅಲರ್ಜನ್ ಆಗಿದ್ದು, ಚರ್ಮದ ಕೋಶಗಳನ್ನು ತಕ್ಷಣವೇ ಕೆರಳಿಸುವ ಗುಣ ಹೊಂದಿದೆ.
2. ಅಮೈಲ್ ಸಿನ್ನಮಾಲ್ ಮತ್ತು ಹೆಕ್ಸಿಲ್ ಸಿನ್ನಮಾಲ್ (Amyl & Hexyl Cinnamal)
ಇವು ಸುಗಂಧರಾಜ ಹೂವಿನಲ್ಲಿ ನೈಸರ್ಗಿಕವಾಗಿ ಕಂಡುಬರುವ ಪ್ರಮುಖ ಸುಗಂಧ ಕಣಗಳು. ಇವು ಚರ್ಮಕ್ಕೆ ತಗುಲಿದಾಗ ರೋಗನಿರೋಧಕ ಶಕ್ತಿಯು ತಕ್ಷಣವೇ ಪ್ರತಿಕ್ರಿಯಿಸಿ ದದ್ದುಗಳನ್ನು ಉಂಟುಮಾಡುತ್ತದೆ.
3. ಲಿನಾಲೂಲ್ ಮತ್ತು ಲಿಮೋನೀನ್ (Linalool & Limonene)
ಇವು ಬಹುತೇಕ ಎಲ್ಲಾ ಸುಗಂಧಭರಿತ ಹೂವುಗಳಲ್ಲಿ ಕಂಡುಬರುವ ಸಾಮಾನ್ಯ ಟರ್ಪೀನ್ಸ್ (Terpenes) ಜಾತಿಗೆ ಸೇರಿದ ತೈಲ. ಇವುಗಳ ಅತ್ಯಂತ ಆಘಾತಕಾರಿ ವೈಜ್ಞಾನಿಕ ಸತ್ಯವೆಂದರೆ, ಹೂವಿನಲ್ಲಿರುವಾಗ ಇವು ನೇರವಾಗಿ ಅಲರ್ಜಿ ಮಾಡುವುದಿಲ್ಲ. ಆದರೆ, ಹೂವನ್ನು ಕಿತ್ತ ಬಳಿಕ ಇವು ವಾತಾವರಣದ ಗಾಳಿಗೆ (Air Exposure) ಒಡ್ಡಿಕೊಂಡಾಗ ಆಮ್ಲೀಕರಣಗೊಂಡು (Oxidation) ಅತ್ಯಂತ ಅಪಾಯಕಾರಿ ಅಲರ್ಜನ್‌ಗಳಾಗಿ ಬದಲಾಗುತ್ತವೆ!
4. ಮಿಥೈಲ್ ಸ್ಯಾಲಿಸಿಲೇಟ್ (Methyl Salicylate)
ಇದು ಹೂವಿನ ದಳಗಳಲ್ಲಿ ನೈಸರ್ಗಿಕವಾಗಿರುವ ಮತ್ತೊಂದು ಪ್ರಮುಖ ಅಂಶ. ಈ ಸಂಯುಕ್ತವು ಚರ್ಮದ ರಕ್ಷಣಾ ಕವಚವನ್ನು (Skin Barrier) ದುರ್ಬಲಗೊಳಿಸಿ, ತೀವ್ರವಾದ ಉರಿ (Burning sensation) ಮತ್ತು ತುರಿಕೆಯನ್ನು ಉಂಟುಮಾಡುತ್ತದೆ.
ಗಾಳಿಗೆ ಒಡ್ಡಿಕೊಂಡಾಗ ಹೆಚ್ಚಾಗುತ್ತೆ ಹೂವಿನ ಹಾರಗಳ ಅಲರ್ಜಿ!
ನಾವು ಮಾರುಕಟ್ಟೆಯಿಂದ ತರುವ ಸುಗಂಧರಾಜ ಹೂವಿನ ಹಾರಗಳು ಹೆಚ್ಚು ಸಮಯ ಗಾಳಿಗೆ ಒಡ್ಡಿಕೊಳ್ಳುವುದರಿಂದ, ಅವುಗಳಲ್ಲಿರುವ ‘ಲಿನಾಲೂಲ್’ ಮತ್ತು ‘ಲಿಮೋನೀನ್’ ತೈಲಗಳು ಆಕ್ಸಿಡೈಸ್ ಆಗಿ ಚರ್ಮದ ಅಲರ್ಜಿಯ ತೀವ್ರತೆಯನ್ನು ದುಪ್ಪಟ್ಟು ಮಾಡುತ್ತವೆ. ಹೀಗಾಗಿಯೇ ತಾಜಾ ಹೂವನ್ನು ಗಿಡದಿಂದ ನೇರವಾಗಿ ಮುಟ್ಟಿದಾಗ ಆಗದ ಅಲರ್ಜಿ, ಮಾರುಕಟ್ಟೆಯಿಂದ ತಂದ ಹಾರವನ್ನು ಮುಟ್ಟಿದಾಗ ಅಥವಾ ಮುಡಿದಾಗ ತಕ್ಷಣವೇ ಕಾಣಿಸಿಕೊಳ್ಳುತ್ತದೆ.
ಎಲ್ಲರಿಗೂ ಈ ಅಲರ್ಜಿ ಬರುವುದಿಲ್ಲ ಏಕೆ?
“ನಮ್ಮ ಮನೆಯವರು ದಿನಾ ಈ ಹೂವು ಮುಟ್ಟುತ್ತಾರೆ, ಅವರಿಗೇನೂ ಆಗಲ್ಲ, ನನಗೇಕೆ ಹೀಗಾಗುತ್ತೆ?” ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಚರ್ಮದ ಈ ರಿಯಾಕ್ಷನ್ ಪ್ರತಿಯೊಬ್ಬರ ಅನುವಂಶಿಕತೆ (Genetics), ಚರ್ಮದ ಆರೋಗ್ಯದ ರಕ್ಷಣಾ ಕವಚ (Skin Barrier) ಹಾಗೂ ಈ ಹಿಂದೆ ಆ ಹೂವಿಗೆ ಚರ್ಮ ಎಷ್ಟು ಬಾರಿ ಒಡ್ಡಿಕೊಂಡಿದೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಕೆಲವರು ವರ್ಷಗಟ್ಟಲೆ ಸುಗಂಧರಾಜ ಹೂವನ್ನು ಆರಾಮವಾಗಿ ಬಳಸಿರುತ್ತಾರೆ, ಆದರೆ ಚರ್ಮದ ನಿರೋಧಕ ಶಕ್ತಿ ಹಠಾತ್ ಬದಲಾದಾಗ ದಿಢೀರನೇ ಅಲರ್ಜಿ ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ : ಗೋಲಿ ಕಣ್ಣುಗಳ ಈ ಪುಟ್ಟ ಹುಡುಗ ಈಗ ರಾಜ್ಯನಾಯಕ! – ಡಿಕೆಶಿ ಬಾಲ್ಯದ ಅಪರೂಪದ ಫೋಟೋಸ್ ಇಲ್ಲಿದೆ

