ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಆಗಬೇಕೆಂಬ ಇಚ್ಛೆಯಿದ್ದಲ್ಲಿ ಸ್ವಾಗತಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಖರ್ಗೆ ಒಂದು ವೇಳೆ ಸಿಎಂ ಆದರೆ ನಾನು ಸಿಎಂ ಸ್ಪರ್ಧೆಯಿಂದ ಹೊರಗೆ ಉಳಿದು ಅವರೊಡನೆ ಕೆಲಸ ಮಾಡಲು ಇಚ್ಛಿಸುತ್ತೇನೆ ಎಂದಿದ್ದಾರೆ.
ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ಸಿಎಂ ಸ್ಥಾನಕ್ಕೆ ನಡೆಯುತ್ತಿರುವ ಸ್ಪರ್ಧೆಯ ಬಗ್ಗೆ ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ನಾನೂ ಇಬ್ಬರೂ ಸಿಎಂ ಸ್ಥಾನದ ಆಕಾಂಕ್ಷಿಗಳೆಂಬುದು ನಿಜ. ಆದರೆ ಹೈಕಮ್ಯಾಂಡ್ ನಿಲುವು ಅಂತಿಮ. ಹೈಕಮ್ಯಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಿದ್ದೇವೆ ಎಂದು ಪುನರುಚ್ಛರಿಸಿದ್ದಾರೆ.
ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಬಗ್ಗೆಯೂ ಮಾತನಾಡುತ್ತಾ, ನಮ್ಮ ಪಕ್ಷದ ಹಿರಿಯನಾಯಕರಾದ ಖರ್ಗೆಯವರಿಗೆ ಐವತ್ತು ವರ್ಷಗಳ ರಾಜಕೀಯ ಅನುಭವವಿದೆ. ಈ ಚುನಾವಣೆಯಲ್ಲಿ ನನಗೆ ಹಾಗೂ ಸಿದ್ದರಾಮಯ್ಯನವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಕರ್ನಾಟಕದ ರಾಜಕಾರಣದ ಬಗ್ಗೆ ಅವರಿಗೆ ಆಳವಾದ ಅರಿವಿದೆ. ಅವರು ಸಿಎಂ ಆದರೆ ನಾನು ಅವರೊಡನೆ ಕೆಲಸ ಮಾಡಲು ಇಚ್ಛಿಸುತ್ತೇನೆ ಎಂದಿದ್ದಾರೆ.