Monday, June 15, 2026
Homeಟಾಪ್ ನ್ಯೂಸ್BENGALURU: ಸಿಎಂ ಪ್ರಮಾಣ ವಚನಕ್ಕೆ ಖಾಕಿ ಮೆಗಾ ಪ್ಲಾನ್: ರೋಡ್ ಶೋಗೆ ಇಲ್ಲ ಅವಕಾಶ; ಕಮಿಷನರ್...

BENGALURU: ಸಿಎಂ ಪ್ರಮಾಣ ವಚನಕ್ಕೆ ಖಾಕಿ ಮೆಗಾ ಪ್ಲಾನ್: ರೋಡ್ ಶೋಗೆ ಇಲ್ಲ ಅವಕಾಶ; ಕಮಿಷನರ್ ಮಾಹಿತಿ

ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೆಲ ಗಂಟೆಗಳಷ್ಟೇ ಬಾಖಿ ಇದೆ. ಈ ಹಿನ್ನೆಲೆಯಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ (Bengaluru) ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಜನರಿಗೆ ತೊಂದರೆ ಆಗದಂತೆ ವ್ಯವಸ್ಥೆ
ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ (ಸಿಪಿ) ಸೀಮಂತ್ ಕುಮಾರ್ ಸಿಂಗ್ ಅವರು, ನಾಳೆಯ ಹೈ-ವೋಲ್ಟೇಜ್ ಕಾರ್ಯಕ್ರಮಕ್ಕಾಗಿ ನಗರದಲ್ಲಿ ಕೈಗೊಳ್ಳಲಾಗಿರುವ ಟ್ರಾಫಿಕ್ ಹಾಗೂ ಕಾನೂನು ಸುವ್ಯವಸ್ಥೆಯ ಮಾಸ್ಟರ್ ಪ್ಲಾನ್ ಅನ್ನು ಬಿಚ್ಚಿಟ್ಟಿದ್ದಾರೆ.

ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಂಚಾರ ಮಾರ್ಗಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಭದ್ರತೆಗಾಗಿ ಬರೋಬ್ಬರಿ 2 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಖಾಕಿ ಪಡೆ ನಿರ್ಧರಿಸಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅಧಿಕೃತ ಕಾರ್ಯಸೂಚಿಯ ಪ್ರಕಾರವೇ ಇಡೀ ಭದ್ರತಾ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ರಾಜಭವನಕ್ಕೆ ತೆರಳುವ ವಿಶೇಷ ಗಣ್ಯರಿಗಾಗಿ ಡಿಪಿಆರ್ ವತಿಯಿಂದಲೇ ಪ್ರತ್ಯೇಕ ಪಾಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಈ ಬಾರಿಯ ಪ್ರಮಾಣ ವಚನ ಸಮಾರಂಭ ನಡೆಯಲಿರುವ ಲೋಕಭವನದಲ್ಲಿ ಸೀಮಿತ ಆಸನಗಳ ವ್ಯವಸ್ಥೆ ಮಾತ್ರ ಇರಲಿದ್ದು, ಪಾಸ್ ಹೊಂದಿರುವ ಆಹ್ವಾನಿತರನ್ನು ಮಾತ್ರ ನಿಗದಿತ ಸೀಟುಗಳ ಆಧಾರದ ಮೇಲೆ ಒಳಗಡೆ ಬಿಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಬಾರಿ ಗಣ್ಯರ ಪಟ್ಟಿ ಅತ್ಯಂತ ಕಡಿಮೆ ಇರುವುದರಿಂದ ಅದಕ್ಕೆ ತಕ್ಕಂತೆಯೇ ಟ್ರಾಫಿಕ್ ಪ್ಲಾನ್ ಸಿದ್ಧಪಡಿಸಲಾಗಿದೆ.

ನಗರದ ವಿವಿಧೆಡೆ ಎಲ್‌ಇಡಿ ಪರದೆ
ಇನ್ನು ಸಾರ್ವಜನಿಕರು ಸಮಾರಂಭವನ್ನು ವೀಕ್ಷಿಸಲು ನಗರದ ವಿವಿಧೆಡೆ ಎಲ್‌ಇಡಿ (LED) ಪರದೆಗಳನ್ನು ಅಳವಡಿಸಲಾಗುತ್ತಿದ್ದು, ಆಯ್ದ ಜಾಗಗಳಲ್ಲಿ ಮಾತ್ರ ಜನ ಸೇರಲು ಅವಕಾಶ ನೀಡಲಾಗಿದೆ. ಆದರೆ, ಯಾವುದೇ ಕಾರಣಕ್ಕೂ ರಾಜಧಾನಿಯಲ್ಲಿ ಹೂವಿನ ಹಾರ ಹಾಕುವ ಅಥವಾ ಅಭಿಮಾನಿಗಳ ಸೋಗಿನಲ್ಲಿ ‘ರೋಡ್ ಶೋ’ ನಡೆಸಲು ಕಡಕ್ ಆಗಿ ಅವಕಾಶವನ್ನು ನಿರಾಕರಿಸಲಾಗಿದೆ.

ಈ ಬೃಹತ್ ಭದ್ರತಾ ಕಾರ್ಯಾಚರಣೆಗಾಗಿ ಬೆಂಗಳೂರು ನಗರ ಪೊಲೀಸ್ ವಿಭಾಗದಲ್ಲಿ ಈ ಹಿಂದೆ ಕೆಲಸ ಮಾಡಿ ದಕ್ಷತೆ ಹಾಗೂ ಅನುಭವ ಹೊಂದಿರುವ ಹಳೇ ತಲೆಮಾರಿನ ಅಧಿಕಾರಿಗಳನ್ನು ವಿಶೇಷವಾಗಿ ಕರೆಸಿಕೊಂಡು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ನಾಳೆ ಮಧ್ಯಾಹ್ನದ ನಂತರ ವಿಧಾನಸೌಧ, ಲೋಕಭವನ ಹಾಗೂ ರಾಜಭವನದ ಸುತ್ತಮುತ್ತಲಿನ ರಸ್ತೆಗಳ ಸಂಚಾರದಲ್ಲಿ ಭಾರಿ ಬದಲಾವಣೆಗಳಾಗಲಿದ್ದು, ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕೆಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಡಿಕೆಶಿ ಪದಗ್ರಹಣ – ಸಿಹಿ ಹಂಚಲು ಸಿದ್ಧವಾಯ್ತು ಲಕ್ಷ ಲಕ್ಷ ಲಾಡು! -VIDEO

ಹೆಚ್ಚಿನ ಸುದ್ದಿ

Change Language »
error: Content is protected !!