ನವದೆಹಲಿ : ಡಿಸಿಎಂ ಡಿಕೆಶಿಗೆ ಸಾಲು ಸಾಲು ಸಂಕಷ್ಟ ಎದುರಾಗಿದ್ದು, ಇವತ್ತು ಶಿವಕುಮಾರ್ ವಿರುದ್ಧದ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಯತ್ನಾಳ್ ಹಾಗೂ ಸಿಬಿಐ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಯಲಿದೆ.
ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿ ಹಿಂಪಡೆದಿರುವ ಸಚಿವ ಸಂಪುಟದ ತೀರ್ಮಾನವನ್ನು ಪ್ರಶ್ನಿಸಲಾದ ರಿಟ್ ಅರ್ಜಿ ವಿಚಾರಣೆ ಇವತ್ತು ನಡೆಯಲಿದೆ.
ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಯಾವೆಲ್ಲಾ ಅಂಶಗಳು ವಾದ-ಪ್ರತಿವಾದಗಳ ನಡುವೆ ಗಣನೆಗೆ ಬರುತ್ತೆ ಎಂಬುದೇ ತೀವ್ರ ಕುತೂಹಲ ಕೆರಳಿಸಿದೆ.
ದೆಹಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಡಿಕೆಶಿಗೆ ಸೇರಿದ ಆಸ್ತಿಗಳಲ್ಲಿ 2017ರ ಆಗಸ್ಟ್ 2ರಂದು ಆದಾಯ ತೆರಿಗೆ ಇಲಾಖೆ ಶೋಧ ನಡೆಸಿತ್ತು. ಈ ವೇಳೆ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ನಂತರ ಜಾರಿ ನಿರ್ದೇಶನಾಲಯ ಡಿಕೆಶಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಡಿಕೆಶಿ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟವು ಹಿಂಪಡೆದಿತ್ತು.