ಬೆಂಗಳೂರು: ನಾಡಿನ ಹಿತಕಾಯುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ, ಮಾನಮರ್ಯಾದೆ ಇದ್ದರೆ ಬೊಮ್ಮಾಯಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ಕರ್ನಾಟಕದ ಗಡಿಯಲ್ಲಿರುವ ಹಳ್ಳಿಗಳಲ್ಲಿ ಮಹಾರಾಷ್ಟ್ರದ ಶಿವಸೇನೆ ಸರ್ಕಾರ ತಮ್ಮ ಆರೋಗ್ಯ ಯೋಜನೆಯನ್ನು ಜಾರಿ ಮಾಡುತ್ತಿದೆ. ಆದರೆ ರಾಜ್ಯದ ಜನರ ಹಿತಕಾಯುವ ಪ್ರಮಾಣವಚನ ಸ್ವೀಕರಿಸುವ ಸಿಎಂ ಬಸವರಾಜ ಬೊಮ್ಮಾಯಿ ಕರ್ತವ್ಯಭ್ರಷ್ಟರಾಗಿದ್ದಾರೆ ಎಂದು ಟೀಕಿಸಿದರು.
ನಮ್ಮ ರಾಜ್ಯದ ಜನರಿಗೆ ಯೋಜನೆ ಘೋಷಿಸಲು ಮಹಾರಾಷ್ಟ್ರದವರು ಯಾರು? ಕಲಾವಿದರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್, ರಾಜ್ಯಪಾಲರು ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಗುಡುಗಿದ್ದಾರೆ.
ಇದೇ ವೇಳೆ, ರಾಜ್ಯಕ್ಕೆ ಅಮುಲ್ ಹಾಲಿನ ಉತ್ಪನ್ನಗಳು ಪ್ರವೇಶಿಸಿರುವ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ನಂದಿನಿಯನ್ನು ಮುಗಿಸಿ ಅಮುಲ್ ಸಂಸ್ಥೆಯನ್ನು ಬೆಳೆಸಲು ಬಿಜೆಪಿ ತೀರ್ಮಾನಿಸಿದೆ. ಆ ಮೂಲಕ ರಾಜ್ಯದ ಹಾಲು ಉತ್ಪಾದಕ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.