ಬೆಂಗಳೂರು : ಮನರೇಗಾ ಯೋಜನೆ ಹಾಗೂ ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಬಹಿರಂಗ ಚರ್ಚೆಗೆ ಬರಲಿ. ಆ ಮೂಲಕ ಜನರಿಗೆ ಈ ವಿಚಾರವಾಗಿ ಜಾಗೃತಿ ಮೂಡಿಸಬಹುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar )ಅವರು ಸವಾಲೆಸೆದಿದ್ದಾರೆ. ಶುಕ್ರವಾರ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಯುಪಿಎ ಸರ್ಕಾರದ ಅವಧಿಯ ಮನರೇಗಾ ಯೋಜನೆಯಲ್ಲಿ 11 ಲಕ್ಷ ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ , ಸಿಬಿಐ ತನಿಖೆ ಎದುರಿಸಲೂ ಸಹ ನಾವು ಸಿದ್ದರಿದ್ದೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಅಥವಾ ಕೇಂದ್ರ ಸಚಿವರು, ಈ ಮೂವರಲ್ಲಿ ಯಾರಾದರೂ ಒಬ್ಬರು ಮಾಧ್ಯಮ ವೇದಿಕೆ ಮೇಲೆ ಚರ್ಚೆಗೆ ಬರಲಿ. ನಾನು ಈ ವಿಚಾರವಾಗಿ ಚರ್ಚೆ ಮಾಡಲು ಸಿದ್ಧನಿದ್ದೇನೆ. ಈ ಯೋಜನೆಯಲ್ಲಿ ಅವ್ಯವಹಾರವಾಗಿದ್ದರೆ ಸಿಬಿಐ ತನಿಖೆಗೆ ನೀಡಲಿ. ಅದು ಎಷ್ಟೇ ಕೋಟಿ ಅವ್ಯವಹಾರವಾದರೂ ತಾಕತ್ತಿದ್ದರೆ ತನಿಖೆ ಮಾಡಿಸಲಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಯಾವುದೇ ನಾಯಕರು ಇಂತಹ ಆರೋಪ ಮಾಡಲು ಸಾಧ್ಯವಿಲ್ಲ, ಅವರು ನಿಜವಾಗಿಯೂ ಈ ರೀತಿ ಹೇಳಿದ್ದಾರಾ? ಎಂದು ಪ್ರಶ್ನಿಸಿದರು.
ಮನರೇಗಾ ಉಳಿಸಲು 2 ದಿನಗಳ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಕೇ ಮಾತನಾಡಿ, 2 ದಿನ ವಿಶೇಷ ಅಧಿವೇಶನ ಕರೆದು ಈ ವಿಚಾರವಾಗಿ ಸಂಪೂರ್ಣ ಚರ್ಚೆ ಮಾಡಲಾಗುವುದು. ಬಿಜೆಪಿಯವರು ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಅಭಿಯಾನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಕಾರ್ಯಕ್ರಮದ ಬಗ್ಗೆ ಅವರು ಸಮರ್ಥನೆ ಮಾಡಿಕೊಳ್ಳಲಿ, ಈ ಕಾರ್ಯಕ್ರಮದಿಂದ ಏನೆಲ್ಲಾ ಕೆಟ್ಟ ಪರಿಣಾಮ ಬೀರಲಿದೆ ಎಂದು ನಾವು ಹೇಳುತ್ತೇವೆ ಎಂದರು.
ಡಿಸಿಎಂ ಆದ ತಕ್ಷಣ ವಿಶೇಷ ಕೊಂಬು ಇರುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಟೀಕೆಗೆ ತಿರುಗೇಟು ನೀಡಿದ ಡಿಸಿಎಂ, ಅವರ ಶಾಸಕರುಗಳು ಇದ್ದಾರಲ್ಲಾ ಅವರ ಮೂಲಕ ಈ ವಿಚಾರವನ್ನು ಚರ್ಚೆ ಮಾಡಲು ಹೇಳಲಿ” ಎಂದು ಹೇಳಿದರು.
ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವದಂತಿ – ನೋ ವೇ ಎಂದ ಸತೀಶ್ ಜಾರಕಿಹೊಳಿ!
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಪ್ರಸ್ತುತ ಯಾವುದೇ ಹಂತದಲ್ಲೂ ನಾಯಕತ್ವ ಬದಲಾವಣೆ ವಿಚಾರ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಚರ್ಚೆ ಆಗುತ್ತಿದೆ ಅಷ್ಟೇ, ಆದರೆ ಯಾವಾಗ ಎಂಬುದು ಯಾರಿಗೂ ಗೊತ್ತಿಲ್ಲ. ಇವತ್ತೂ ಇಲ್ಲ, ನಾಳೆಯೂ ಇಲ್ಲ, ಮುಂದೆಯೂ ಇಲ್ಲ. ನಮ್ಮ ಹಂತದಲ್ಲಿ ಯಾವುದೂ ಆಗುವುದಿಲ್ಲ. ಅಂತಿಮ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಎಷ್ಟು ದಿನ ಇರ್ತಾರೆ ಎಂಬ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇಂತಹ ಮಾತುಗಳನ್ನು ಎಲ್ಲರೂ ಸಾಮಾನ್ಯವಾಗಿ ಹೇಳುತ್ತಾರೆ. ಇದು ಹೊಸದೇನಲ್ಲ, ಪ್ರಾಕ್ಟೀಸ್ ಆಗಿದೆ. ಆದರೆ ಸದ್ಯದ ಸಿಎಂ ಬದಲಾವಣೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಇನ್ನು ಇದೇ ವೇಳೆ ಡಿಕೆ ಶಿವಕುಮಾರ್ ಅಸ್ಸಾಂ ವೀಕ್ಷಕರಾಗಿ ನೇಮಕ ಮಾಡಿದ ವಿಚಾರದ ಬಗ್ಗೆ ಸತೀಶ್ ಜಾರಕಿಹೊಳಿ, ಡಿಕೆ ಶಿವಕುಮಾರ್ ಗೆ ವೀಕ್ಷಕರ ಜವಾಬ್ದಾರಿ ನೀಡಲಾಗಿದೆ. ಬೇರೆಯವರಿಗೂ ಉಸ್ತುವಾರಿ ನೀಡಲಾಗಿದೆ. ಚುನಾವಣೆ ಮುಗಿಯುವವರೆಗೆ ಅವರು ಅಲ್ಲೇ ಇರಬೇಕಾಗುತ್ತದೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಹಸ್ತಕ್ಷೇಪದ ಬಗ್ಗೆ ಹೆಚ್‌ಡಿ ಕುಮಾರಸ್ವಾಮಿ ಆರೋಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಹೋದಾಗ ಸಭೆ ಮಾಡಿರಬಹುದು. ಸಚಿವರಾಗಿರದಿದ್ದರೂ ಸಭೆ ಮಾಡಿರಬಹುದು. ಅದನ್ನು ತಪ್ಪು ಎಂದು ಹೇಗೆ ಹೇಳಬಹುದು? ಅವರ ಜಾಗದಲ್ಲಿ ಯಾರೇ ಇದ್ದರೂ ಹಾಗೇ ಮಾಡುತ್ತಿದ್ದರು. ಕುಮಾರಸ್ವಾಮಿ ಅವರ ಹೇಳಿಕೆಗೆ ಬೇರೆ ವ್ಯಾಖ್ಯಾನ ಇರಬಹುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಕನ್ನಡ ಶಾಲೆಗಳಲ್ಲಿ ಮಲೆಯಾಳಂ ಪಠ್ಯ ಸಂಬಂಧಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ವಿಷಯಕ್ಕೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡಬೇಕು. ಸಿಎಂ ಅವರು ಕೇವಲ ಟ್ವೀಟ್‌ಗೆ ಸೀಮಿತವಾಗದೇ, ಕೇರಳ ಸರ್ಕಾರದ ಜೊತೆ ಮಾತನಾಡುತ್ತಾರೆ, ಎಂದು ಹೇಳಿದರು.
ಇನ್ನು ನರೇಗಾ ಯೋಜನೆಯಲ್ಲಿ ರಾಜ್ಯಕ್ಕೆ ಶೇ. 40 ಮತ್ತು ಕೇಂದ್ರಕ್ಕೆ ಶೇ. 60 ಹಣ ಹಂಚಿಕೆ ಮಾಡುವ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿದ ಜಾರಕಿಹೊಳಿ, ರಾಜ್ಯ ಸರ್ಕಾರ ಯಾಕೆ 40% ಕೊಡಬೇಕು? ದೆಹಲಿಯಲ್ಲಿ ಕುಳಿತು ಕೆಲಸ ಹೇಳ್ತಾರೆ ಅಂದ್ರೆ ಹೇಗೆ? ಬಹಳಷ್ಟು ಬಿಜೆಪಿ ನಾಯಕರೇ ಈ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರಿಗೂ ಅನುಕೂಲವಾಗುವ ವ್ಯವಸ್ಥೆ ಆಗಬೇಕು ಎಂಬುದು ನಮ್ಮ ನಿಲುವು ಎಂದು ತಿಳಿಸಿದರು.
ಇದೇ ವೇಳೆ ಬೆಳಗಾವಿ ಬಾಯ್ಲಾರ್ ದುರಂತ ಪ್ರಕರಣದ ಕುರಿತು ಮಾತನಾಡಿದ ಜಾರಕಿಹೊಳಿ, ಪ್ರತಿ ಮೃತರಿಗೆ ₹20 ಲಕ್ಷ ಪರಿಹಾರ ಘೋಷಿಸಲಾಗಿದೆ. ಪರಿಹಾರದ ಜೊತೆಗೆ ಕಾರ್ಮಿಕ ವಿಮಾ ಯೋಜನೆಯ ಹಣವೂ ದೊರೆಯಲಿದೆ. ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಗಳ ಜೊತೆ ಮಾತನಾಡಿದ್ದಾರೆ ಎಂದು ಹೇಳಿದರು.