Sunday, June 7, 2026
Homeಟಾಪ್ ನ್ಯೂಸ್ಶಾಸಕರ ಮನೆ ಬಾಗಿಲು ತಟ್ಟಿದ್ದು ನಾನಲ್ಲ ನೀವು- ಸಿಎಂ ಗೆ ಡಿಕೆಶಿ ತಿರುಗೇಟು

ಶಾಸಕರ ಮನೆ ಬಾಗಿಲು ತಟ್ಟಿದ್ದು ನಾನಲ್ಲ ನೀವು- ಸಿಎಂ ಗೆ ಡಿಕೆಶಿ ತಿರುಗೇಟು

ಡಿ.ಕೆ.ಶಿವಕುಮಾರ್ ನಮ್ಮ ಶಾಸಕರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಈ ಹಿಂದೆ ನೀವು ಮಾಡಿದ್ದೂ ಸಹ ಅದನ್ನೇ ಅಲ್ಲವೇ ಎಂದು ಪ್ರಶ್ನಿಸಿರುವ ಡಿಕೆಶಿ ಕಾಂಗ್ರೆಸ್ ನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಟೀಕಿಸಿದ್ದಾರೆ.
ಗುರುವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿಯ ಶಾಸಕ ಪುಟ್ಟಣ್ಣ ಗೌಡರು, ಮತ್ತೊಬ್ಬ ಮಾಜಿ ಶಾಸಕ ಬಾಬುರಾವ್ ಚಿಂಚನಸೂರ್, ಯಡಿಯೂರಪ್ಪನವರ ಆಪ್ತ ಮೋಹನ್ ಲಿಂಬಿಕಾಯಿ, ಬಣಕಾರ್ ಸೇರಿದಂತೆ ಇಂದೂ ಸಹ ಹಲವು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ನುಡಿದ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವಿರುದ್ದ ಹರಿಹಾಯ್ದರು.
ರಾಜ್ಯದ ಜನತೆ ಬಿಜೆಪಿಗೆ 112 ಸ್ಥಾನಗಳ ಬಹುಮತ ನೀಡಿರಲಿಲ್ಲ. ಕಾಂಗ್ರೆಸ್ ನಿಂದ ಐದು ಮಂದಿ, ಜನತಾದಳದಿಂದ ಮೂವರು, ಇಬ್ಬರು ಪಕ್ಷೇತರರನ್ನು ಸೇರಿಸಿಕೊಂಡು ಸರ್ಕಾರ ಮಾಡುತ್ತಾ ಅಧಿಕಾರ ಅನುಭವಿಸುತ್ತಿರುವ ನಿಮಗೆ ಪ್ರಶ್ನಿಸಲು ಯಾವ ನೈತಿಕತೆ ಎಂದ ಡಿಕೆಶಿ, ಬಿಜೆಪಿ, ಜಿಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಕೊಲೇಷನ್ ಸರ್ಕಾರ ನಡೆಸುತ್ತಿರುವ ಆಡಳಿತ ರಾಜ್ಯದ ಜನರಿಗೆ ದೊಡ್ಡ ಶಾಪವಾಗಿ ಪರಿವರ್ತನೆಯಾಗಿದೆ ಎಂದರು.
ಪ್ರತಿದಿನ ನಿಮ್ಮ ಎಲ್ಲಾ ಶಾಸಕರು ತಮ್ಮ ಪಾಪಗಳನ್ನು ಸಗಣಿ, ಗಂಜಲ ಹಾಕಿ ತೊಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವ ಸಗಣಿ ಗಂಜಲದಿಂದಲೂ ಅದು ಸಾಧ್ಯವಿಲ್ಲ ಎಂದು ಡಿಕೆಶಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು .
ಜೆಡಿಎಸ್ ಪಕ್ಷದ 37 ಮಂದಿ ಮುಖಂಡರು ಹಾಗೂ ಹಲವು ಬಿಜೆಪಿ ನಾಯಕರನ್ನು ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಸ್ವಾಗತಿಸಲಾಯಿತು.

ಹೆಚ್ಚಿನ ಸುದ್ದಿ

Change Language »
error: Content is protected !!