ಬೆಂಗಳೂರು : ನಮ್ಮ ಸರ್ಕಾರ (Congress government) ನುಡಿದಂತೆ ನಡೆದಿದೆ. ಬೇರೆ ಯಾವ ಸರ್ಕಾರಗಳು ಮಾಡದ ಕೆಲಸ ಮಾಡಿ ನಿಮ್ಮ ಹೃದಯ ಗೆದ್ದಿದ್ದೇವೆ. ನೀವುಗಳು ನಿಮ್ಮ ಮನೆ, ದೇವಾಲಯಗಳನ್ನು ಕಾಪಾಡಿಕೊಳ್ಳುವಂತೆ ನಿಮ್ಮ ಸರ್ಕಾರವನ್ನು ಕಾಪಾಡಿಕೊಳ್ಳಿ” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ಅರ್ಚಕರಿಗೆ (Priests) ಕರೆ ನೀಡಿದರು.
ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಆರ್ಚಕರ ಆಗಮಿಕರ ಮತ್ತು ನೌಕರರ ಸಂಘ ಬೆಂಗಳೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಅಭಿನಂದನಾ ಸಮಾರಂಭವನ್ನು ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.
“ನೀವೆಲ್ಲರೂ ನಮ್ಮ ಮೇಲೆ ಇಷ್ಟು ವಿಶ್ವಾಸ ಇಟ್ಟಿದ್ದೀರಿ. ಇತಿಹಾಸದಲ್ಲಿ ಯಾರೂ ಮಾಡದ ಕೆಲಸ ರಾಮಲಿಂಗಾ ರೆಡ್ಡಿ ಅವರು ಮಾಡಿದ್ದಾರೆ ಎಂದು ನೀವೆಲ್ಲರೂ ವಿಶ್ವಾಸ ವ್ಯಕ್ತಪಡಿಸಿದ್ದೀರಿ. ನಿಮ್ಮ ಈ ವಿಶ್ವಾಸ ನೋಡಿ ನನಗೆ ಸರ್ವಜ್ಞರ ಮಾತು ನೆನಪಾಗುತ್ತದೆ. ನಿಂಬೆ ಹುಳಿಗಿಂತ ಶ್ರೇಷ್ಠವಾದ ಮತ್ತೊಂದು ಹುಳಿ ಇಲ್ಲ. ದುಂಬಿಗಿಂತ ಶ್ರೇಷ್ಠವಾದ ಕಪ್ಪು ಬಣ್ಣ ಬೇರೆ ಇಲ್ಲ, ಶಂಭುವಿಗಿಂತ ದೊಡ್ಡ ದೇವರಿಲ್ಲ, ನಂಬಿಕೆಗಿಂತ ದೊಡ್ಡ ಗುಣವಿಲ್ಲ. ನೀವು ನಮ್ಮ ಸರ್ಕಾರ ಹಾಗೂ ರಾಮಲಿಂಗಾರೆಡ್ಡಿ ಅವರ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ನಿಮ್ಮ ಪಾದಗಳಿಗೆ ನಮಿಸುತ್ತೇನೆ” ಎಂದರು.
ಇದನ್ನೂ ಓದಿ : ಬಿಜೆಪಿಗೆ ಹೋಗಿದ್ದರೆ ಮಂತ್ರಿಯಾಗುತ್ತಿದ್ದೆ! ಕಾಂಗ್ರೆಸ್ ವಿರುದ್ಧ ಶಾಸಕ ಸುಬ್ಬಾರೆಡ್ಡಿ ಅಸಮಾಧಾನ
“ನಿಮ್ಮ ನಮ್ಮ ಈ ಬಾಂಧವ್ಯ ನನ್ನನ್ನು ಹಾಗೂ ರಾಮಲಿಂಗಾ ರೆಡ್ಡಿ ಅವರನ್ನು ಮತ್ತೇ ವಿಧಾನಸೌಧದಲ್ಲಿ ಕೂರಿಸುವಂತೆ ಮಾಡಬೇಕು. ದಿನ ನಿತ್ಯ ನಿಮ್ಮ ಬಳಿಗೆ ನೂರಾರು ಜನ ಬರುತ್ತಾರೆ. ನಾನು ಏನಾದರೂ ಮಾತನಾಡಿದರೆ ನನ್ನ ಸ್ವಾರ್ಥ ಎಂದು ಹೇಳುತ್ತಾರೆ. ನೀವು ಮಾತನಾಡಿದರೆ ದೇವರ ಪರವಾಗಿ ಮಾತನಾಡಿದಂತೆ. ನೀವೆಲ್ಲರೂ ದೇವರ ಮಕ್ಕಳಂತೆ. ಮತ್ತೆ ಈ ಸರ್ಕಾರವನ್ನು ತರುವುದು ನಿಮ್ಮ ಜವಾಬ್ದಾರಿ ಅಲ್ಲವೇ?” ಎಂದರು.
“ನಮ್ಮ ಸರ್ಕಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ ಇವೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ನೀವು ಭಕ್ತರ ಪ್ರಾರ್ಥನೆಯನ್ನು ದೇವರಿಗೆ ತಲುಪಿಸುವ ಏಜೆಂಟರಿದ್ದಂತೆ. ಮುಂದೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲು ನೀವು ಶ್ರಮಿಸಬೇಕು. ನಾವು ಮಾಡುತ್ತಿರುವ ಜನಸೇವೆ ಜನಾರ್ದನ ಸೇವೆ” ಎಂದು ತಿಳಿಸಿದರು.