ಭೋಪಾಲ್: “ನಾನು ಅಯೋಧ್ಯೆ (Ayodhya) ರಾಮಮಂದಿರ (Ram Mandir) ನಿರ್ಮಾಣಕ್ಕಾಗಿ ನೀಡಿದ್ದ 1.11 ಲಕ್ಷ ರೂಪಾಯಿ ದೇಣಿಗೆ ಹಣವನ್ನು ನನಗೆ ತಕ್ಷಣ ವಾಪಸ್ ನೀಡಿ. ಇಲ್ಲದಿದ್ದರೆ ನಾನು ನ್ಯಾಯಾಲಯದ ಮೆಟ್ಟಿಲೇರುತ್ತೇನೆ,” ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ (Digvijay Singh) ಆಕ್ರೋಶ ಹೊರಹಾಕಿದ್ದಾರೆ. ರಾಮಮಂದಿರ ದೇಣಿಗೆ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿರುವ ಅವರು, ಈ ಕುರಿತು ಅಯೋಧ್ಯೆಯಲ್ಲೇ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.
ದೇಣಿಗೆ ಲೂಟಿಯಾಗಿದೆ, ಪೊಲೀಸರ ಮೇಲೆ ನಂಬಿಕೆಯಿಲ್ಲ”
ತಮ್ಮ ದೇಣಿಗೆ ಹಣದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ದಿಗ್ವಿಜಯ್ ಸಿಂಗ್, ನಾನು ರಾಮಮಂದಿರಕ್ಕೆ ನೀಡಿದ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡು ಲೂಟಿ ಮಾಡಲಾಗಿದೆ. ಆದ್ದರಿಂದ ಆ ಹಣವನ್ನು ನನಗೆ ಹಿಂತಿರುಗಿಸಬೇಕು, ಅದನ್ನು ನಾನು ಬೇರೆ ಅಧಿಕೃತ ರಾಮಾಲಯ ಟ್ರಸ್ಟ್‌ನಲ್ಲಿ ಠೇವಣಿ ಇಡುತ್ತೇನೆ. ಸದ್ಯ ಪೊಲೀಸರು ಬಿಜೆಪಿ ನಿಯಂತ್ರಣದಲ್ಲಿ ಇರುವುದರಿಂದ ನನಗೆ ಪೊಲೀಸ್ ಠಾಣೆಯ ಮೇಲೆ ನಂಬಿಕೆ ಇಲ್ಲ. ಹಾಗಾಗಿ ನಾನು ನೇರವಾಗಿ ನ್ಯಾಯಾಲಯಕ್ಕೆ ಹೋಗಿ ಕಾನೂನು ಹೋರಾಟ ನಡೆಸುತ್ತೇನೆ, ಎಂದಿದ್ದಾರೆ. ಅಲ್ಲದೆ, ತಾವು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ಗಿಂತಲೂ ಹೆಚ್ಚಿನ ದೇಣಿಗೆ ನೀಡಿದ್ದಾಗಿ ಅವರು ಇದೇ ವೇಳೆ ಹೇಳಿಕೊಂಡಿದ್ದಾರೆ.
ಎರಡು ಬಾರಿ ದೇಣಿಗೆ ನೀಡಿದ್ದೇನೆ”
ತಮ್ಮ ಭಕ್ತಿ ಹಾಗೂ ದೇಣಿಗೆಯ ಇತಿಹಾಸವನ್ನು ಹಂಚಿಕೊಂಡ ಕಾಂಗ್ರೆಸ್ ನಾಯಕ, ನಮಗೆ ಭಗವಾನ್ ಶ್ರೀರಾಮ ಮತ್ತು ರಾಮಮಂದಿರದ ಮೇಲೆ ಅಪಾರ ನಂಬಿಕೆಯಿದೆ. ಮಂದಿರಕ್ಕಾಗಿ ಎರಡು ಬಾರಿ ನಿಧಿ ಸಂಗ್ರಹ ಅಭಿಯಾನಗಳು ನಡೆದಿದ್ದವು. ಎಲ್.ಕೆ. ಅಡ್ವಾಣಿಯವರ ರಥಯಾತ್ರೆ ನಡೆದ ಸಂದರ್ಭದಲ್ಲೇ ನಾನು ಮೊದಲ ಬಾರಿಗೆ ದೇಣಿಗೆ ನೀಡಿದ್ದೆ. ಆದರೆ ಅಂದು ಸಂಗ್ರಹಿಸಿದ ಕೋಟ್ಯಂತರ ರೂಪಾಯಿ ದೇಣಿಗೆಗೆ ಎಂದಿಗೂ ಲೆಕ್ಕವೇ ಸಿಗಲಿಲ್ಲ, ಎಂದು ಆರೋಪಿಸಿದರು.ಸುಪ್ರೀಂ ಕೋರ್ಟ್ ತೀರ್ಪಿನ ನಂತರ ವಿಶ್ವ ಹಿಂದೂ ಪರಿಷತ್ (VHP) ಮತ್ತೊಮ್ಮೆ ಅಭಿಯಾನ ಆರಂಭಿಸಿತು. ಆದರೆ ನನಗೆ ಅವರ ಮೇಲೆ ನಂಬಿಕೆ ಇಲ್ಲದ ಕಾರಣ ನಾನು ಅವರಿಗೆ ನೇರವಾಗಿ ದೇಣಿಗೆ ನೀಡಲಿಲ್ಲ, ಎಂದು ಸ್ಪಷ್ಟಪಡಿಸಿದರು.
ದೇಣಿಗೆ ಕಳ್ಳರಿಗೆ ಪ್ರವೇಶವಿಲ್ಲ
ಈ ವಿವಾದದ ಬೆನ್ನಲ್ಲೇ ದಿಗ್ವಿಜಯ್ ಸಿಂಗ್ ಅವರು ಭೋಪಾಲ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದ ಹೊರಗೆ ದೇಣಿಗೆ ಕಳ್ಳರು ಮನೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಬರೆದಿರುವ ವಿವಾದಾತ್ಮಕ ಬ್ಯಾನರ್ ಒಂದನ್ನು ಹಾಕಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಉಜ್ಜಯಿನಿಯಿಂದ ಅಯೋಧ್ಯೆಗೆ ಪಾದಯಾತ್ರೆ
ರಾಮಮಂದಿರ ದೇಣಿಗೆಯ ಪಾರದರ್ಶಕತೆಗಾಗಿ ತಾವೊಂದು ದೊಡ್ಡ ಅಭಿಯಾನ ಹಮ್ಮಿಕೊಳ್ಳುತ್ತಿರುವುದಾಗಿ ಪ್ರಕಟಿಸಿದ ಸಿಂಗ್, ಬರುವ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ಉಜ್ಜಯಿನಿಯ ಪವಿತ್ರ ಮಹಾಕಾಲ್ ದೇವಸ್ಥಾನದಿಂದ ಅಯೋಧ್ಯೆಯ ಶ್ರೀರಾಮ ಮಂದಿರದವರೆಗೆ ಮೆರವಣಿಗೆ ಹಾಗೂ ಪಾದಯಾತ್ರೆ ನಡೆಸಲಿದ್ದೇನೆ. ಇದು ಸಂಪೂರ್ಣವಾಗಿ ರಾಜಕೀಯೇತರ ಕಾರ್ಯಕ್ರಮವಾಗಿದ್ದು, ತಮ್ಮ ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಲೆಕ್ಕಿಸದೆ ರಾಮಮಂದಿರಕ್ಕೆ ದೇಣಿಗೆ ನೀಡಿರುವ ಪ್ರತಿಯೊಬ್ಬ ಸಾರ್ವಜನಿಕರು ಇದರಲ್ಲಿ ಭಾಗವಹಿಸಬೇಕು, ಎಂದು ಮನವಿ ಮಾಡಿದ್ದಾರೆ.