ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ವತಿಯಿಂದ ಏಪ್ರಿಲ್ 15 ರಿಂದ ಎಂಡ್ ಟು ಎಂಡ್ ಡಿಜಿಟಲ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಈ ಮೆಗಾ ವರ್ಚುವಲ್ ಉದ್ಯೋಗ ಮೇಳದಲ್ಲಿ ಸುಮಾರು 2,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು 10ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸುತ್ತಿವೆ.
ಈ ಬಗ್ಗೆ ಮಾಹಿತಿ ನೀಡಿದ ಕೆಎಸ್‌ಒಯು ಉಪಕುಲಪತಿ ಪ್ರೊ.ಶರಣಪ್ಪ ವಿ ಹಾಲ್ಸೆ, ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಈ ಉದ್ಯೋಗ ಮೇಳ ಮುಕ್ತ ಅವಕಾಶ ನೀಡುತ್ತಿದೆ. ಈ ಮೇಳದಲ್ಲಿ ಅಭ್ಯರ್ಥಿಗಳು 10ಕ್ಕೂ ಹೆಚ್ಚು ಸಂಸ್ಥೆಗಳಿಂದ 2,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಪಡೆದುಳ್ಳಬಹುದು. ಜತೆಗೆ ವಾರ್ಷಿಕ 3 ಲಕ್ಷದಿಂದ 6 ಲಕ್ಷ ರೂ.ವರೆಗೆ ವೇತನ ಪ್ಯಾಕೇಜ್‌ಗಳನ್ನು ಪಡೆಯಬಹುದು ಎಂದಿದ್ದಾರೆ.
ರಾಜ್ಯದಾದ್ಯಂತ ವಿದ್ಯಾರ್ಥಿಗಳು ದೂರದ ಸ್ಥಳಗಳಿಂದ ಬರುವುದು ಕಷ್ಟ. ಹೀಗಾಗಿ ವರ್ಚುವಲ್ ಮೂಲಕ ಉದ್ಯೋಗಾವಕಾಶಗಳನ್ನು ಹುಡುಕಲು ಸಹಾಯ ಮಾಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.