ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆ ಘೋಷಣೆಯಾಗಿದ್ದು, ಮೇ 10 ಮತದಾನ ಹಾಗೂ 13 ರಂದು ಮತ ಎಣಿಕೆ ಅಂದೇ ಫಲಿತಾಂಶ ಘೋಷಣೆಯಾಗಲಿದೆ. ಈ ಹಿನ್ನೆಲೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿಭಿನ್ನ ರೀತಿಯಲ್ಲಿ ಮತದಾನದ ಜಾಗೃತಿ ಮೂಡಿಸಿದ್ದಾರೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಟ್ವಿಟರ್ ಖಾತೆ ಮೂಲಕ, ಸರ್ಫ್ ಎಕ್ಸೆಲ್, ಮ್ಯಾಗಿ ಪ್ಯಾಕೆಟ್ ಹಾಗೂ ಬಿಎಂಡಬ್ಲ್ಯೂ ಲೊಗೊ ತರಹದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸರ್ಫ್ ಎಕ್ಸೆಲ್ ಪ್ಯಾಕೆಟ್ ಮಾದರಿಯ ಪೋಸ್ಟ್ ಗೆ, “ಆಲೋಚನೆಗಳು ನಿಷ್ಕಲ್ಮಶವಾಗಿರದಿದ್ದರೆ ಸಮಾಜ ಶುದ್ಧವಾಗಿರುವುದು ಹೇಗೆ? ಆಲೋಚಿಸಿ ಮತ ಚಲಾಯಿಸಿ” ಎಂದು ಬರೆಯಲಾಗಿದೆ.
ಮ್ಯಾಗಿ ಪ್ಯಾಕೆಟ್ ಮಾದರಿಯ ಪೋಸ್ಟ್ ಗೆ, “ನೀವು ಈವಾಗ ವೋಟ್ ಮಾಡೋದಕ್ಕೆ ಸ್ವಲ್ಪ ಸಮಯ ತೆಗೆದಿಟ್ರೆ ಮುಂದೆ 5 ವರ್ಷ ಆರಾಮಾಗಿ ಇರಬಹುದು. ಜವಾಬ್ದಾರಿಯುತವಾಗಿರಿ, ನಿಮ್ಮ ಪ್ರತಿ ಮತವೂ ಅಮೂಲ್ಯ” ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್ನು, ಬಿಎಂಡಬ್ಲ್ಯೂ ಲೊಗೊ ಮಾದರಿಯ ಪೋಸ್ಟ್ ಗೆ, “ಮೇ 10 ರಂದು ಎಲ್ಲರ ಪಯಣ ಮತಗಟ್ಟೆಯತ್ತವಿರಲಿ. ಈ ಬಾರಿ ಶೇಕಡಾವಾರು ಮತದಾನದಲ್ಲಿ ದಾಖಲೆ ಸೃಷ್ಟಿಸಿ” ಎಂದು ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ನಾವು ಹೆಚ್ಚಿನ ಸಂಖ್ಯೆಯ ವಿಶ್ವವಿದ್ಯಾನಿಲಯಗಳನ್ನು ಸಂಪರ್ಕಿಸಿದ್ದು, ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಸಾಕ್ಷರತಾ ಕ್ಲಬ್‌ಗಳು ಮತ್ತು ಸ್ವಯಂಪ್ರೇರಿತ ಕಾರ್ಯಕ್ರಮಗಳಂತಹ ಜಾಗೃತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ್ದೇವೆ. ಜೊತೆಗೆ, ನಾವು ಐಟಿ ವಲಯವನ್ನು ಕೂಡ ಮತದಾನ ಜಾಗೃತಿಯಲ್ಲಿ ಭಾಗಿಯಾಗುವಂತೆ ವಿನಂತಿಸಿದ್ದೇವೆ. ಚುನಾವಣಾ ಜಾಗೃತಿ ನಿಟ್ಟಿನಲ್ಲಿ ಎಲೆಕ್ಥಾನ್ ನಡೆಸುತ್ತಿರುವ ಐಐಎಸ್ಸಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಐಐಎಸ್ಸಿ ಹೊರತುಪಡಿಸಿ ಐಐಟಿ ಕೂಡ ಆಯೋಗದ ಜೊತೆ ಕೈಜೋಡಿಸಿದೆ ಎಂದು ಅವರು ಹೇಳಿದ್ದರು.
ಇದೀಗ ಕರ್ನಾಟಕ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿಭಿನ್ನ ರೀತಿಯಲ್ಲಿ ಮತದಾನದ ಜಾಗೃತಿ ಕಂಡು ಎಲ್ಲರು ಹುಬ್ಬೇರಿಸಿದ್ದಾರೆ.