ವಾಷಿಂಗ್ಟನ್: ಇತ್ತೀಚೆಗೆ ಅಮೆರಿಕ ತನ್ನ ದೇಶದಲ್ಲಿ ಅಕ್ರಮವಾಗಿ ನೆಲೆಸಿದ ಭಾರತೀಯರು ಸೇರಿದಂತೆ ಸಾವಿರಾರು ಜನರನ್ನು ಗಡಿಪಾರು ಮಾಡಿದೆ. ಕೈಗಳಿಗೆ ಕೋಳ ಹಾಗೂ ಕಾಲುಗಳಿಗೆ ಸಂಕೋಲೆಗಳಿಂದ ಬಂಧಿಸಿ ಅವರನ್ನು ವಿಮಾನವನ್ನೇರಿಸಿ ಭದ್ರತಾ ಸಿಬ್ಬಂದಿಗಳು ಗಡಿಪಾರು ಮಾಡುತ್ತಿರುವುದಕ್ಕೆ ಜಾಗತಿಕವಾಗಿ ವಿರೋಧ ವ್ಯಕ್ತವಾಗಿದೆ.
ಆದರೆ ಇದಾವುದಕ್ಕೂ ಕ್ಯಾರೇ ಎನ್ನದ ಅಮೆರಿಕ ತನ್ನ ವಿವಾದಿತ ಕ್ರಮವನ್ನು ಮುಂದುವರಿಸುತ್ತಿದೆ. ಇದೀಗ ಅಕ್ರಮವ ವಲಸಿಗರನ್ನು ಗಡಿಪಾರು ಮಾಡುತ್ತಿರುವ ಎಎಸ್‌ಎಂಆರ್ ವಿಡಿಯೋವನ್ನು ಕೂಡಾ ಅಮೆರಿಕದ ಶ್ವೇತಭವನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಎಕ್ಸ್‌ನಲ್ಲಿ ಹಂಚಿಕೊಂಡಿರುವ 41 ಸೆಕೆಂಡುಗಳ ವೀಡಿಯೊದಲ್ಲಿ ಅಕ್ರಮ ವಲಸಿಗರನ್ನು ಸೇನಾ ವಿಮಾನಗಳ ಮೂಲಕ ವಾಪಸ್ ಕಳುಹಿಸುತ್ತಿರುವುದು ಕಂಡುಬಂದಿದೆ. ಗಡೀಪಾರು ಮಾಡುತ್ತಿರುವವರ ಕೈಗಳಿಗೆ ಹಾಗೂ ಕಾಲುಗಳಿಗೆ ಸಂಕೋಲೆ ಹಾಕುತ್ತಿರುವುದು ಕಂಡುಬಂದಿದೆ. ಆದರೆ ವೀಡಿಯೊದಲ್ಲಿರುವ ವಲಸಿಗರ ಮುಖ ಗೋಚರಿಸದ ಕಾರಣ ಅವರ ರಾಷ್ಟ್ರೀಯತೆಗಳು ಸ್ಪಷ್ಟವಾಗಿಲ್ಲ.
ASMR: Illegal Alien Deportation Flight 🔊 pic.twitter.com/O6L1iYt9b4
— The White House (@WhiteHouse) February 18, 2025
ಈ ವರ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಅಮೆರಿಕದಿಂದ 333 ಅಕ್ರಮ ಭಾರತೀಯ ವಲಸಿಗರನ್ನು ಗಡಿಪಾರು ಮಾಡಲಾಗಿದೆ. ಈ ವಲಸಿಗರನ್ನು ಮೂರು ಮಿಲಿಟರಿ ವಿಮಾನಗಳಲ್ಲಿ ಗಡಿಪಾರು ಮಾಡಲಾಗಿದೆ. ಈ ಗಡಿಪಾರು ಮಾಡಿದವರನ್ನು ಸಂಕೋಲೆ ಹಾಕಿ ಮಿಲಿಟರಿ ವಿಮಾನಗಳಲ್ಲಿ ಸಾಗಿಸಲಾಗಿತ್ತು. ಈ ಅಮಾನವೀಯ ವರ್ತನೆಯ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿದೆ. ಕೆಲವು ಗಡಿಪಾರಾದ ಸಿಖ್ ಸಮುದಾಯದವರು ಗಡಿಪಾರಿನ ಸಂದರ್ಭದಲ್ಲಿ ತಮ್ಮ ಟರ್ಬನ್‌ಗಳನ್ನು ತೆಗೆದಿದ್ದಾರೆ ಎಂದು ಆರೋಪಿಸಿದ್ದಾರೆ.