ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಗೊಂದಲ ಏರ್ಪಟ್ಟಿದ್ದು, ಸಿದ್ದು ಅಭಿಮಾನಿಗಳು ಅವರ ನಿವಾಸದ ಮುಂದೆ ಹೈಡ್ರಾಮ ಮಾಡಿದ್ದಾರೆ. ಸಿದ್ದರಾಮಯ್ಯ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸದಿದ್ದರೆ ಆತ್ಮಹತ್ಯೆ ಮಾಡುವುದಾಗಿ ಬೆದರಿಸಿದ ಘಟನೆಯೂ ನಡೆದಿದೆ.
ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸ್ಪರ್ಧಿಸಿದ್ದ ಸಿದ್ದು, ಈ ಬಾರಿ ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿದ್ದರು. ಸಿದ್ದರಾಮಯ್ಯ ಸ್ಪರ್ಧೇ ಬಗ್ಗೆ ಕೋಲಾರದಲ್ಲಿ ಸಿದ್ದತೆ ಕೂಡಾ ಆರಂಭವಾಗಿತ್ತು. ಈ ನಡುವೆ ಹೈಕಮಾಂಡ್ ಕೋಲಾರದಲ್ಲಿ ಸ್ಪರ್ಧಿಸದಂತೆ ಸಿದ್ದುಗೆ ಸಲಹೆ ನೀಡಿದ್ದು, ಹೈಕಮಾಂಡ್ ತೀರ್ಮಾನದಂತೆ ಸ್ಪರ್ಧಿಸುವುದಾಗಿ ವಿಪಕ್ಷ ನಾಯಕರು ಹೇಳಿದ್ದಾರೆ.
ಇದು ಕೋಲಾರದಲ್ಲಿನ ಅವರ ಅಭಿಮಾನಿಗಳಿಗೆ ತೀವ್ರ ನಿರಾಶೆಯನ್ನು ತಂದಿದ್ದು, ಸಿದ್ದರಾಮಯ್ಯ ಅವರ ಬೆಂಗಳೂರಿನ ನಿವಾಸಕ್ಕೆ ಗುಂಪು ಕಟ್ಟಿ ಬಂದ ಅಭಿಮಾನಿಗಳು ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಒತ್ತಡ ಹೇರಿದ್ದಾರೆ.
ಶರ್ಟ್ ಬಿಚ್ಚಿ ಬಾರುಕೋಲಿನಿಂದ ಅಭಿಮಾನಿಯೊಬ್ಬರು ಹೊಡೆದುಕೊಂಡ ಘಟನೆಯೂ ನಡೆದಿದೆ. ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ಹೈಡ್ರಾಮವೇ ನಡೆದಿದೆ.
ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಿದ್ದರೆ ಕೋಲಾರ ಭಾಗದ ಇತರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅನುಕೂಲವಾಗಲಿದ್ದು, ಸಿದ್ದರಾಮಯ್ಯ ಅವರ ವರ್ಚಸ್ಸು ತಮ್ಮ ಕ್ಷೇತ್ರಗಳಲ್ಲೂ ಬಿದ್ದು, ತಮ್ಮ ಗೆಲುವಿಗೆ ಸಹಾಯ ಆಗಲಿದೆ ಎನ್ನುವ ಲೆಕ್ಕಾಚಾರಗಳು ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿದ್ದವು. ಏಕಾಏಕಿ, ಸಿದ್ದು ವಿರೋಧಿ ಅಲೆ ಕೋಲಾರದಲ್ಲಿ ಇದೆ ಎಂದು ಸುದ್ದಿಯಾದರೆ ಅದು ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಿನ್ನೆಡೆಯಾಗುವ ಆತಂಕವೂ ಅವರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದು ಕೋಲಾರದಿಂದಲೇ ಸ್ಪರ್ಧಿಸಬೇಕೆಂಬುದು ಸ್ಥಳೀಯ ಅಭ್ಯರ್ಥಿಗಳ ಬೇಡಿಕೆಯೂ ಆಗಿದೆ ಎನ್ನಲಾಗಿದೆ.