ಕೋಲಾರ : ಚಿಕನ್ ಅಂಗಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅಯ್ಯೂಬ್ ಖಾನ್ ಎಂಬಾತ ಅನುಮಾನಾಸ್ಪದ ರೀತಿಯಲ್ಲಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೋಲಾರದ ಕೊಂಡಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಕೆಲದಿನಗಳ ಹಿಂದಷ್ಟೇ ಈತನ ಮೊಬೈಲ್‍ನಿಂದ ಮೆಸೇಜ್ ಹೋಗಿದ್ದ ಕಾರಣಕ್ಕೆ ಯುವತಿಯ ಕುಟುಂಬದವರೊಬ್ಬರು ಬಂದು ಜಗಳ ಮಾಡಿಕೊಂಡು ಹೋಗಿದ್ದರು. ಹೀಗಾಗಿ ಈತನ ಸಾವಿನ ಸುತ್ತ ಕೊಲೆಯ ಶಂಕೆ ವ್ಯಕ್ತವಾಗಿದೆ.
ಕೆಲದಿನಗಳ ಹಿಂದಷ್ಟೇ ಅಯ್ಯೂಬ್ ಖಾನ್ ಹೊಸ ಆಂಡ್ರಾಯ್ಡ್ ಮೊಬೈಲ್ ಖರೀದಿಸಿದ್ದ. ಬಳಿಕ ಸಮೀಪದ ಪನಮನಹಳ್ಳಿಯ ಯುವತಿಯೊಬ್ಬಳ ಸಂಬಂಧಿಕರು ಮನೆಗೆ ಬಂದು ಯುವತಿಗೆ ಮೆಸೇಜ್ ಕಳಿಸಿದ ವಿಷಯಕ್ಕೆ ಗಲಾಟೆ ಮಾಡಿದ್ದರು. ಕೇವಲ ಐದನೇ ತರಗತಿ ಓದಿರುವ ನನಗೆ ಮೆಸೇಜ್ ಕಳಿಸಲು ಬರುವುದಿಲ್ಲ. ನನ್ನ ಮೊಬೈಲ್‍ನಿಂದ ಬೇರೆಯವರು ಕಳಿಸಿರಬಹುದು ಎಂದು ಅಯ್ಯೂಬ್ ಖಾನ್ ಹೇಳಿದ್ದ. ಆದರೆ ಯುವತಿಯ ಮನೆಯವರು ಕೊಲೆ ಬೆದರಿಕೆ ಹಾಕಿ ಹೋಗಿದ್ದರು.
ಮಾ.30 ರಂದು ಅಯ್ಯೂಬ್ ಖಾನ್ ಮನೆಯಿಂದ ನಾಪತ್ತೆಯಾಗಿದ್ದು, ಭಾನುವಾರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ದೇಹದ ಮೇಲೆ ಮಾರಣಾಂತಿಕ ಗಾಯಗಳಿದ್ದು, ಕುಟುಂಬದವರು ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.