ಬೆಂಗಳೂರು : ಬೆಂಗಳೂರಿನ (Bengaluru ) ಬ್ರೂಕ್‌ಫೀಲ್ಡ್‌ನಲ್ಲಿರುವ ಡೇ-ಕೇರ್ ಸೆಂಟರ್‌ನಲ್ಲಿ (Day care ) ಮಕ್ಕಳ ಮೇಲೆ ನಡೆದ ಹಲ್ಲೆ (Crime ) ಪ್ರಕರಣ ಇಡೀ ನಗರವನ್ನು ಬೆಚ್ಚಿಬೀಳಿಸಿದೆ.
ಈ ಗಂಭೀರ ಘಟನೆಗೆ ಸಂಬಂಧಿಸಿದಂತೆ ಐಟಿ ದೈತ್ಯ ಕ್ಯಾಪ್‌ಜೆಮಿನಿ (Capgemini) ಸಂಸ್ಥೆ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪ್ರತಿಯೊಬ್ಬ ಮಗುವಿನ ಸುರಕ್ಷತೆ ಮತ್ತು ಯೋಗಕ್ಷೇಮವೇ ನಮ್ಮ ಅತ್ಯುನ್ನತ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದೆ.
ಸಂಸ್ಥೆಯ ಕಚೇರಿ ಆವರಣದಲ್ಲಿದ್ದ ಈ ಡೇ ಕೇರ್ ಕೇಂದ್ರವನ್ನು ‘ಲಿಟಲ್ ಸ್ಕಾಲರ್ಸ್’ (Little Scholars) ಎಂಬ ಬಾಹ್ಯ ಸೇವಾ ಪೂರೈಕೆದಾರ ಸಂಸ್ಥೆ ನಿರ್ವಹಿಸುತ್ತಿತ್ತು ಎಂದು ಕ್ಯಾಪ್‌ಜೆಮಿನಿ ತಿಳಿಸಿದೆ. ಸದ್ಯ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ಸತ್ಯಾಂಶವನ್ನು ಹೊರತರಲು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೆಚ್‌ಎಎಲ್ ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.
ಮುಂಜಾಗ್ರತಾ ಕ್ರಮವಾಗಿ ತನಿಖೆ ಪೂರ್ಣಗೊಳ್ಳುವವರೆಗೂ ಸದರಿ ಡೇ ಕೇರ್ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇನ್ನು ಮಕ್ಕಳನ್ನು ಹೊಂದಿರುವ ಸಂಸ್ಥೆಯ ಉದ್ಯೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಸದ್ಯ ‘ವರ್ಕ್ ಫ್ರಂ ಹೋಮ್’ (ಮನೆಯಿಂದಲೇ ಕೆಲಸ) ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಭಾರತದಾದ್ಯಂತ ಇರುವ ತನ್ನೆಲ್ಲಾ ಕಚೇರಿಗಳ ಡೇ-ಕೇರ್ ವ್ಯವಸ್ಥೆಯನ್ನು ಮರುಪರಿಶೀಲಿಸುವುದಾಗಿ ಸಂಸ್ಥೆ ತಿಳಿಸಿದೆ.
ಕೇಸ್ ಹಿನ್ನೆಲೆ ಏನು..?
ಇತ್ತೀಚೆಗೆ ಬ್ರೂಕ್‌ಫೀಲ್ಡ್‌ನ ಈ ಕೇಂದ್ರದಲ್ಲಿ ಆಯಾಗಳು ಮಕ್ಕಳಿಗೆ ದೈಹಿಕವಾಗಿ ಕ್ರೂರವಾಗಿ ಹಿಂಸೆ ನೀಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದನ್ನು ಗಮನಿಸಿದ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : SIR ವಿವಾದ: ಮಸೀದಿ ಕಚೇರಿಯೊಳಗೆ ಕುಳಿತು ಚುನಾವಣಾ ಫಾರ್ಮ್ ಭರ್ತಿ ಮಾಡಿದ್ರಾ ಬಿಎಲ್‌ಒ!