ದಾವಣಗೆರೆ/ಬಾಗಲಕೋಟೆ: ದಾವಣಗೆರೆಯ ದಕ್ಷಿಣ ವಿಧಾನಸಭಾ ಕ್ಷೇತ್ರವು ಈಗ ರಾಜಕೀಯವಾಗಿ ಅಕ್ಷರಶಃ ಕೆಂಡದಂತಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಏಪ್ರಿಲ್ 9 ಮತದಾನ ನಡೆಯಲಿದ್ದು, ಪ್ರತಿಷ್ಠಿತ ಶಾಮನೂರು ಕುಟುಂಬದ ಕುಡಿ ಮತ್ತು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನ (By Election) ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿದೆ.
ಸಮರ್ಥ್ ಮಲ್ಲಿಕಾರ್ಜುನ್, ಕಾಂಗ್ರೆಸ್ ಅಭ್ಯರ್ಥಿ
ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರರಾದ ಸಮರ್ಥ್ ಮಲ್ಲಿಕಾರ್ಜುನ್ ಈ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶಾಮನೂರು ಕುಟುಂಬಕ್ಕೆ ಈ ಕ್ಷೇತ್ರದಲ್ಲಿರುವ ಐತಿಹಾಸಿಕ ವರ್ಚಸ್ಸು ಮತ್ತು ದಾವಣಗೆರೆ ದಣಿಗಳ ಮೇಲಿರುವ ಅಭಿಮಾನವೇ ಇವರಿಗೆ ದೊಡ್ಡ ಶಕ್ತಿ ಆಗಲಿದೆ. ಯುವಕರನ್ನು ಸೆಳೆಯಲು ಇವರು ಹೊಸ ಯೋಜನೆಗಳ ಭರವಸೆ ನೀಡುತ್ತಿದ್ದಾರೆ. ಅಲ್ಲದೆ, ತಂದೆ ಮತ್ತು ಅಜ್ಜನ ಅಭಿವೃದ್ಧಿ ಕೆಲಸಗಳೇ ಇವರ ಪ್ರಚಾರದ ಪ್ರಮುಖ ಅಸ್ತ್ರ ಆಗಿದೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದು, ಅವರು ಈ ಬಾರಿ ಶಾಮನೂರು ಕುಟುಂಬದ ಅಭ್ಯರ್ಥಿಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಇವರ ಗೆಲುವಿನ ಮೇಲೆ ಪ್ರಭಾವ ಬೀರಲಿದೆ.
ಶ್ರೀನಿವಾಸ್ ಟಿ. ದಾಸ ಕರಿಯಪ್ಪ, ಬಿಜೆಪಿ ಅಭ್ಯರ್ಥಿ
ಬಿಜೆಪಿ ಈ ಬಾರಿ ಅನಿರೀಕ್ಷಿತವಾಗಿ ಸಾಮಾನ್ಯ ಕಾರ್ಯಕರ್ತ ಶ್ರೀನಿವಾಸ್ ದಾಸ್ ಕರಿಯಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಇವರು ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಗುರುತಿಸಿಕೊಂಡವರು. ತಳಮಟ್ಟದ ಸಂಘಟನೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿರುವುದು ಇವರಿಗೆ ದೊಡ್ಡ ಬಲ ತಂದಿದೆ. ಹಿಂದೂ ಮತಗಳ ಧ್ರುವೀಕರಣ ಮತ್ತು ಕುಟುಂಬ ರಾಜಕಾರಣದ ವಿರುದ್ಧದ ಅಲೆ ಇವರ ಪಾಲಿಗೆ ಪ್ಲಸ್ ಪಾಯಿಂಟ್ ಆಗಬಹುದು. ಶಾಮನೂರು ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಪ್ರಭಾವವನ್ನು ಎದುರಿಸಿ ಮತ ಪಡೆಯುವುದು ಇವರಿಗೆ ದೊಡ್ಡ ಸವಾಲಾಗಿದೆ.
ಚಾಲುಕ್ಯರ ನಾಡು ಬಾಗಲಕೋಟೆಯಲ್ಲಿ ಈಗ ಚುನಾವಣಾ ಕಿಚ್ಚು ಗರಿಷ್ಠ ಮಟ್ಟ ತಲುಪಿದೆ. ಮಾಜಿ ಸಚಿವ ಹೆಚ್.ವೈ. ಮೇಟಿ ಅವರ ಅಗಲಿಕೆಯಿಂದ ಎದುರಾಗಿರುವ ಈ ಉಪಚುನಾವಣೆಯು ಏಪ್ರಿಲ್ 9 ನಡೆಯಲಿದ್ದು, ಕ್ಷೇತ್ರದಾದ್ಯಂತ ಬಿರುಸಿನ ಮತದಾನಕ್ಕೆ ವೇದಿಕೆ ಸಜ್ಜಾಗಿದೆ. ಈ ಬಾರಿಯ ಕದನವು ಬಿಜೆಪಿಯ ಹಿರಿಯ ನಾಯಕ ವೀರಣ್ಣ ಚರಂತಿಮಠ ಮತ್ತು ಕಾಂಗ್ರೆಸ್‌ನ ಯುವ ಮುಖ ಉಮೇಶ್ ಮೇಟಿ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ.
ವೀರಣ್ಣ ಚರಂತಿಮಠ, ಬಿಜೆಪಿ ಅಭ್ಯರ್ಥಿ
ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಕ್ಷೇತ್ರದ ಹಿರಿಯ ರಾಜಕಾರಣಿ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರಿಗೆ ಕ್ಷೇತ್ರದ ಮೂಲೆ ಮೂಲೆಯ ಪರಿಚಯವಿದೆ. ಬಾಗಲಕೋಟೆಯ ಪ್ರತಿಷ್ಠಿತ ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷರಾಗಿರುವ ಇವರು, ಸಾವಿರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬೆಂಬಲ ಹೊಂದಿದ್ದಾರೆ. ತಾವು ಈ ಹಿಂದೆ ಶಾಸಕರಾಗಿದ್ದಾಗ ಮಾಡಿದ ನಗರದ ಅಭಿವೃದ್ಧಿ ಕಾರ್ಯಗಳು ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಒಡನಾಟ ಇವರ ಗೆಲುವಿಗೆ ಶ್ರೀರಕ್ಷೆಯಾಗುವ ನಿರೀಕ್ಷೆಯಿದೆ. ಲಿಂಗಾಯತ ಮತ ಬ್ಯಾಂಕ್ ಮೇಲೆ ಇವರು ಬಲವಾದ ಹಿಡಿತ ಹೊಂದಿದ್ದಾರೆ.
ಇದನ್ನೂ ಓದಿ: ಉಪಚುನಾವಣೆ ಹಿನ್ನೆಲೆ ಸರ್ಕಾರಿ ರಜೆ ಘೋಷಣೆ ಮಾಡಿದ ರಾಜ್ಯ ಸರ್ಕಾರ