ಬೆಂಗಳೂರು: ನಾಳೆ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆ (By Election) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 9ರಂದು ಈ ಎರಡು ಕ್ಷೇತ್ರಗಳಲ್ಲಿ ಸರ್ಕಾರ ರಜೆ ಘೋಷಣೆ ಮಾಡಿದೆ.
ಯಾರಿಗೆಲ್ಲಾ ಸರ್ಕಾರಿ ರಜೆ ಘೋಷಣೆ?
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಎಲ್ಲಾ ಸರ್ಕಾರಿ ಉದ್ಯೋಗಿಗಳಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅದರ ಜೊತೆಗೆ ರಾಷ್ಟ್ರೀಯ ಬ್ಯಾಂಕ್‌ಗಳು, ಎಲ್‌ಐಸಿ, ಖಾಸಗಿ ಸಂಸ್ಥೆಗಳು ಹಾಗೂ ಹಣಕಾಸಿನ ಸಂಸ್ಥೆಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ.
ಮತದಾರರಿಗೆ ವೇತನ ಸಹಿತ ರಜೆ ನೀಡುವಂತೆ ಚುನಾವಣಾ ಆಯೋಗ ಆದೇಶ
ನಾಳೆ ಅಂದರೆ ಏಪ್ರಿಲ್ 9ರಂದು ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆ ಸೇರಿದಂತೆ ಅಸ್ಸಾಂ, ಕೇರಳ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭೆ ಚುನಾವಣೆಗೆ (Election) ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾನ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ನೌಕರರಿಗೆ ಚುನಾವಣಾ ಆಯೋಗವು ವೇತನ ಸಹಿತ ರಜೆ ಘೋಷಿಸಿದೆ.
ನಾಳೆ ಮತದಾನ: ಎಲ್ಲೆಲ್ಲಿ ಚುನಾವಣೆ?
ಏಪ್ರಿಲ್ 9 ರಂದು ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಇದರ ಜೊತೆಗೆ ಕೇರಳ, ಅಸ್ಸಾಂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ನಾಳೆ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಇನ್ನುಳಿದಂತೆ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಏಪ್ರಿಲ್ 23 ಮತ್ತು 29 ರಂದು ಮತದಾನ ನಿಗದಿಯಾಗಿದೆ.
ನೌಕರರಿಗೆ ಸಿಗಲಿದೆ ವೇತನ ಸಹಿತ ರಜೆ
ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮತ್ತು ಪ್ರತಿಯೊಬ್ಬ ನಾಗರಿಕನು ತನ್ನ ಮತದಾನದ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಈ ಮಹತ್ವದ ಕ್ರಮ ಕೈಗೊಂಡಿದೆ. ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 135 ಬಿ ಅಡಿಯಲ್ಲಿ ಈ ನಿಯಮ ರೂಪಿಸಲಾಗಿದ್ದು, ಖಾಸಗಿ ಕಂಪನಿಗಳು, ಕೈಗಾರಿಕೆಗಳು, ದಿನಗೂಲಿ ನೌಕರರು ಮತ್ತು ತಾತ್ಕಾಲಿಕ ನೌಕರರಿಗೂ ಇದು ಅನ್ವಯವಾಗಲಿದೆ. ಸಾಮಾನ್ಯವಾಗಿ ವೇತನ ಕಡಿತವಾಗುವ ಆತಂಕದಿಂದ ಅನೇಕರು ಮತದಾನದಿಂದ ದೂರ ಉಳಿಯುತ್ತಿದ್ದರು. ಇದನ್ನು ತಪ್ಪಿಸಲು ಆಯೋಗವು ವೇತನ ಸಹಿತ ರಜೆಯನ್ನು ಕಡ್ಡಾಯಗೊಳಿಸಿದೆ.
ಒಂದು ವೇಳೆ ಮತದಾರನು ತನ್ನ ಕ್ಷೇತ್ರಕ್ಕಿಂತ ಹೊರಗಿನ ಪ್ರದೇಶ ಅಥವಾ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದರೂ ಸಹ, ಮತದಾನದ ದಿನದಂದು ಆತನಿಗೆ ರಜೆ ನೀಡುವುದು ಕಂಪನಿಯ ಜವಾಬ್ದಾರಿಯಾಗಿದೆ. ಈ ನಿಯಮವನ್ನು ಉಲ್ಲಂಘಿಸಿ ನೌಕರರಿಗೆ ರಜೆ ನಿರಾಕರಿಸುವ ಅಥವಾ ವೇತನ ಕಡಿತ ಮಾಡುವ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯೋಗ ಎಚ್ಚರಿಸಿದೆ. ಹೀಗಾಗಿ ನಾಳೆ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಕಾರ್ಮಿಕರು ಮತ್ತು ಉದ್ಯೋಗಿಗಳಿಗೆ ಈ ರಜೆಯ ಸೌಲಭ್ಯ ಸಿಗಲಿದೆ.
ಇದನ್ನೂ ಓದಿ : ಯಾರಾಗಲಿದ್ದಾರೆ ಬಾಗಲಕೋಟೆ ಬಾದ್‌ಶಾ? ಉಪಚುನಾವಣೆಗೆ ಭರದ ಸಿದ್ಧತೆ
