ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ ಇದೇ ಮಾ. 29 ರಿಂದ ಏ. 8 ರವರೆಗೆ ನಡೆಯಲಿದೆ. ಹನ್ನೊಂದು ದಿನಗಳ ಈ ಸುಧೀರ್ಘ ಆಚರಣೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಕಳೆದ 12 ವರ್ಷಗಳಿಂದ ಕರಗ ಹೊರುತ್ತಿರುವ, ಧರ್ಮರಾಯ ಸ್ವಾಮಿ ದೇಗುಲದ ಅರ್ಚಕರಾದ ವಿ. ಜ್ಞಾನೇಂದ್ರ ಅವರೇ ಈ ಬಾರಿಯೂ ಕರಗಕ್ಕೆ ಹೆಗಲು ನೀಡಲಿದ್ದಾರೆ.
ಏ. 6 ರಂದು ನಸುಕಿನಲ್ಲಿ ವಿಖ್ಯಾತ ಹೂವಿನ ಕರಗ ಜರುಗಲಿದೆ. ಅದಕ್ಕೂ ಎರಡು ದಿನ ಮುಂಚೆ ಅಂದರೆ, ಏ. 4 ರಂದು ಹಸಿಕರಗ ಅಥವಾ ದ್ರೌಪದಿ ಕರಗ ನಡೆಯಲಿದೆ. ಕರಗ ವೃತಧಾರಿಯು ಅಂದು ದ್ರೌಪದಿಯಂತೆ ಸ್ತ್ರೀ ವೇಷ ಧರಿಸಿ ಕೈಯಲ್ಲಿ ಶಕ್ತ್ಯಾಯುಧವನ್ನು ಹಿಡಿದು ನರ್ತನ ಮಾಡುತ್ತಾ ಮಾಡುತ್ತಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.
ಧರ್ಮರಾಯನ ಕರಗದ ದಿನ ಬಹುಭಾರವುಳ್ಳ ಅತ್ಯಾಕರ್ಷಕ ಹೂಕರಗವನ್ನು ವೃತಧಾರಿ ಹೊತ್ತು ಸಾಗುತ್ತಾರೆ. ಚರ್ಚ್, ಮಸೀದಿಗೂ ಸಹ ಭೇಟಿ ನೀಡುವ ಧರ್ಮರಾಯನ ಕರಗ ಕೋಮು ಸೌಹಾರ್ದತೆಗೂ ಸಹ ಸಾಕ್ಷಿಯಾಗಿದೆ.