ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದ ವ್ಯಕ್ತಿಯೋರ್ವ ಜಿಲ್ಲಾಧಿಕಾರಿ ಸಹಿಯನ್ನೇ ಫೋರ್ಜರಿ ಮಾಡಿ 1.20 ಕೋಟಿ ರೂ ವಂಚಿಸಿರುವುದು ಬೆಳಕಿಗೆ ಬಂದಿದೆ. ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಗ್ರಾಮದ ರಾಜೇಶ್ ವಂಚಕ.
ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ ಆನಂದ್ ಅವರ ಸಹಿಯನ್ನ ಫೋರ್ಜರಿ ಮಾಡಿರುವ ರಾಜೇಶ್ ಗ್ರಾಮೀಣ ರಸಪ್ರಶ್ನೆ ಯೋಜನೆ ಖಾತೆಯಲ್ಲಿನ 1.20 ಕೋಟಿ ರೂಪಾಯಿಯನ್ನು ಚಾಲಾಕಿತನದಿಂದ ಎಗರಿಸಿದ್ದಾನೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬ್ಯಾಂಕ್ ಖಾತೆ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯ ರನ್ನು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಮಾನತು ಮಾಡಿದ್ದಾರೆ.
ಸರ್ಕಾರಿ ದುಡ್ಡನ್ನು ಲಪಟಾಯಿಸಿ ಬೆಂಗಳೂರಿನಲ್ಲಿ ಹಾಯಾಗಿದ್ದ ರಾಜೇಶ್ನನ್ನು ಚಾಮರಾಜನಗರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚೆಕ್‌ಬುಕ್ಗಳನ್ನು ಕದ್ದು ತನ್ನ ಹಾಗೂ ತನ್ನ ಆತ್ಮೀಯರ ಖಾತೆಗೆ ಹಲವು ಬಾರಿ ಹಣ ರವಾನೆ ಮಾಡಿರುವ ಖದೀಮ, ಅಪರ ಜಿಲ್ಲಾಧಿಕಾರಿಗಳ ಖಾತೆಯಲ್ಲಿದ್ದ ಸರ್ಕಾರಿ ಕಚೇರಿ ಕಟ್ಟಡಗಳ ಅನುದಾನ ಸಹ ಬಿಟ್ಟಿಲ್ಲ ಎನ್ನಲಾಗುತ್ತಿದೆ.
ಒಬ್ಬ ಡಿ. ಗ್ರೂಪ್ ಹಂತದ ನೌಕರ ಜಿಲ್ಲಾಡಳಿತದ ಖಜಾನೆಯನ್ನು ದೋಚಿರುವುದು ಪೊಲೀಸರಿಗೆ ಆಶ್ಚರ್ಯವಾಗಿದ್ದು, ಈ ಪ್ರಕರಣದಲ್ಲಿ ಈತನಿಗೆ ಸಹಾಯ ಮಾಡಿದವರ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ.