ರಾಯಚೂರು: ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಮೂವರು ಮಹಿಳೆಯರು ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಯಚೂರಿನ ನೇತಾಜಿನಗರದಲ್ಲಿ ಗುರುವಾರ ನಡೆದಿದೆ. ಮೂವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ನೇತಾಜಿನಗರದ ಈಶ್ವರಗುಡಿಯ ಬಳಿಯ ಖಾಜಾ ಬೀ ಎಂಬುವವರ ಮನೆಯಲ್ಲಿ ಗುರುವಾರ ಮಧ್ಯಾಹ್ನ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿತ್ತು. ಮನೆಯೊಳಗೆ ಇದ್ದ ಮಹಿಳೆಯರು ಹಾಗೂ ಮನೆಕೆಲಸಕ್ಕೆಂದು ಆಗಮಿಸಿದ್ದ ಮಹಿಳೆ ಸೇರಿ ಮೂವರೂ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಫೋಟದ ತೀವ್ರತೆಗೆ ಆಸುಪಾಸಿನ ಕಟ್ಟಡಗಳೂ ಸಹ ಕಂಪಿಸಿದ್ದು, ಮನೆಯ ಬಾಗಿಲು ಛಿದ್ರಗೊಂಡಿದೆ. ಬಾಗಿಲ ಬಳಿ ನಿಂತಿದ್ದ ಮಹಿಳೆ ಏಕಾಏಕಿ ಹೊರಗೆಸೆಯಲ್ಪಟ್ಟಿರುವ ದೃಶ್ಯ ಸ್ಥಳೀಯ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.