ಬೆಂಗಳೂರು: ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ (Medical science) ಪಡೆಯುತ್ತಿರುವ ಯುವತಿಯೊಬ್ಬಳಿಗೆ ಪರೀಕ್ಷಾ ಶುಲ್ಕ (Exam fee) ಭರಿಸುವ ಅಂತಿಮ ದಿನದ ಆತಂಕ ಎದುರಾಗಿತ್ತು. ಸಮಯಕ್ಕೆ ಸರಿಯಾಗಿ ಹಣ ಜಮಾ ಮಾಡದಿದ್ದರೆ ಪರೀಕ್ಷೆ ಬರೆಯಲು ಅವಕಾಶ ಸಿಗುವುದಿಲ್ಲ ಎಂದು ಆಕೆ ಮನೆಯವರಿಗೆ ತಿಳಿಸಿದ್ದಳು. ಕುಟುಂಬಸ್ಥರು ಹಣ ಹೊಂದಿಸುವ ಗಡಿಬಿಡಿಯಲ್ಲಿದ್ದಾಗ, ಈ ಪರಿಸ್ಥಿತಿಯನ್ನೇ ಸೈಬರ್ ಖದೀಮರು(Cyber crime) ಬಂಡವಾಳ ಮಾಡಿಕೊಂಡಿದ್ದಾರೆ.
ದೀಪಿಕಾ ಎಂದು ಗುರುತಿಸಿಕೊಂಡ ಅನಾಮಧೇಯ ಮಹಿಳೆಯೊಬ್ಬಳು ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿದ್ದಾಳೆ. ತಾನು ವಿದ್ಯಾರ್ಥಿನಿಯ ಆಪ್ತ ಗೆಳತಿ ಎಂದು ನಂಬಿಸಿದ ಆಕೆ, ವಿದೇಶಿ ಕರೆನ್ಸಿ ವಿನಿಮಯದ ಯಾವುದೇ ನಷ್ಟವಿಲ್ಲದೆ ನೇರವಾಗಿ ಕಾಲೇಜಿಗೆ ಹಣ ತಲುಪಿಸುವ ಉಪಾಯ ಹೇಳಿದ್ದಾಳೆ. ತನ್ನ ಪರಿಚಿತರ ಖಾತೆಗೆ ಹಣ ಹಾಕಿದರೆ ಸಂಪೂರ್ಣ ಮೊತ್ತ ವಿದ್ಯಾರ್ಥಿನಿಗೆ ಸಿಗುತ್ತದೆ ಎಂದು ನಂಬಿಸಿದ್ದಾಳೆ.
ಇದನ್ನೂ ಓದಿ : ಫೇಸ್ ಬುಕ್ ಮೂಲಕ ಹನಿಟ್ರಾಪ್ ಹಳ್ಳ – ಪ್ರೀತಿ, ಪ್ರೇಮದ ಸೋಗಿನಲ್ಲಿ 7 ಲಕ್ಷಕ್ಕೆ ಉಂಡೆನಾಮ!
ಇದನ್ನು ಸತ್ಯವೆಂದು ಭಾವಿಸಿದ ನವೀನ್ ಎಂಬುವವರು ಆನ್‌ಲೈನ್ ಮೂಲಕ ಹಂತ ಹಂತವಾಗಿ ಒಂದು ಲಕ್ಷ ರೂಪಾಯಿಗಳನ್ನು ಆಕೆ ಸೂಚಿಸಿದ ಖಾತೆಗೆ ಕಳುಹಿಸಿದ್ದಾರೆ. ನಗದು ಕೈ ಸೇರಿದ ಕೂಡಲೇ ಆಕೆ ತನ್ನ ಮೊಬೈಲ್ ಸಂಪರ್ಕ ಕಡಿತಗೊಳಿಸಿ ನಾಪತ್ತೆಯಾಗಿದ್ದಾಳೆ. ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ಸಂತ್ರಸ್ತರು ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಸಿ.ಕೆ. ಅಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕಿಗಾಗಿ ಹುಡುಕಾಟ ಆರಂಭವಾಗಿದೆ.