ಬೆಂಗಳೂರು: ವಿಧಾನಸಭೆ ಚುನಾವಣೆ ಹೊತ್ತಲ್ಲಿ ಕಮಲದ ಒಂದೊಂದೇ ದಳಗಳು ಉದುರುತ್ತಿವೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವ ಜೋರಾಗಿದೆ. ಈಗಾಗಲೇ ಬಿಜೆಪಿ ಎಂಎಲ್‌ಸಿಯಾಗಿದ್ದ ಪುಟ್ಟಣ್ಣ, ಬಾಬುರಾವ್ ಚಿಂಚನಸೂರ್ ಸೇರಿದಂತೆ ಹಲವು ಬಿಜೆಪಿ ನಾಯಕರುಗಳು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇದೀಗ ಹಿರಿಯ ರಾಜಕಾರಣಿ, ಕೂಡ್ಲಗಿ ಬಿಜೆಪಿ ಹಾಲಿ ಶಾಸಕ ಎನ್.ವೈ. ಗೋಪಾಲಕೃಷ್ಣ ಮರಳಿ ಕಾಂಗ್ರೆಸ್ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ.
ನಿನ್ನೆ ಅಂದರೆ ಮಾರ್ಚ್ 27ರ ರಾತ್ರಿ ಕಾಂಗ್ರೆಸ್ ನಾಯಕರನ್ನು ಖುದ್ದು ಭೇಟಿ ಮಾಡಿ ಚರ್ಚಿಸಿರುವ ಗೋಪಾಲಕೃಷ್ಣ ಕಾಂಗ್ರೆಸ್ ಸೇರೋದು ಬಹುತೇಕ ಖಚಿತವಾಗಿದೆ. ರಾಜಾನುಕುಂಟೆ ಸಮೀಪದ ರೆಸಾರ್ಟ್ನಲ್ಲಿ ನಡೆಯುತ್ತಿದ್ದ ಸ್ಕ್ರೀನಿಂಗ್ ಕಮಿಟಿ ಸಭೆ ವೇಳೆ ಗೋಪಾಲಕೃಷ್ಣ ತೆರಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಜೊತೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದ್ದು, ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಶಾಕ್ ನೀಡಿದ್ದಾರೆ.