ಪ್ರಸಕ್ತ ಶೈಕ್ಷಣಿಕ ವರ್ಷ 2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೇವಲ ಒಂದು ವಾರವಷ್ಟೇ ಉಳಿದಿದೆ.
ಮಾ.31 ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಏ. 15 ರವೆಗೆ ನಡೆಯಲಿದೆ. ಈಗಾಗಲೇ ಪರಿಷ್ಕೃತ ವೇಳಾಪಟ್ಟಿಯನ್ನೂ ಸಹ ಪ್ರಕಟಿಸಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಎಸ್‌ಎಸ್‌ಎಲ್‌ಸಿ ಹಾಲ್ ಟಿಕೆಟ್ ನ್ನೂ ಆನ್‌ಲೈನ್ ಮೂಲಕ ಬಿಡುಗಡೆ ಮಾಡಿದ್ದು, ಶಾಲಾ ಮುಖ್ಯೋಪಾಧ್ಯಾಯರು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಬೇಕಿದೆ.
ಪ್ರವೇಶ ಪತ್ರದಲ್ಲಿ ಹೆಸರು, ಜನ್ಮದಿನಾಂಕ, ಪೋಷಕರ ಹೆಸರು, ಭಾವಚಿತ್ರ ಮುಂತಾದ ಯಾವುದೇ ತಿದ್ದುಪಡಿಗೆ ಮಾ.24 ರವರೆಗೂ ಅವಕಾಶ ನೀಡಲಾಗಿದೆ.
ಪಾರದರ್ಶಕ ಹಾಗೂ ಶಿಸ್ತುಬದ್ಧ ರೀತಿಯಲ್ಲಿ ಪರೀಕ್ಷೆ ನಡೆಸುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದ್ದು ಎಲ್ಲಾ ಝೆರಾಕ್ಸ್ ಅಂಗಡಿಗಳ ಮೇಲೆ ಹದ್ದಿನಕಣ್ಣಿಡಲಾಗಿದೆ. ಜೊತೆಗೆ ಆಯಾ ಜಿಲ್ಲಾಧಿಕಾರಿಗಳಿಗೆ ಪರೀಕ್ಷಾ ನಿರ್ವಹಣೆಯ ಹೊಣೆಗಾರಿಕೆ ವಹಿಸಿದ್ದು, ಕರ್ತವ್ಯ ಲೋಪ ಕಂಡು ಬಂದರೆ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಜರಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.