ಚೆನ್ನೈ: ತಮಿಳು ಚಿತ್ರರಂಗದ(Tamil cinema) ಖ್ಯಾತ ನಟ, ‘ದಳಪತಿ’ ವಿಜಯ್(vijay) ಅವರ ಬಹುನಿರೀಕ್ಷಿತ ‘ಜನನಾಯಗನ್'(jananayagan) ಸಿನಿಮಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ದೊಡ್ಡ ಸುದ್ದಿಯೊಂದಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಮುಗಿದು, ‘ಎ’ ಪ್ರಮಾಣಪತ್ರ ಸಿಕ್ಕಿದೆ ಮತ್ತು ಜುಲೈನಲ್ಲೇ ಸಿನಿಮಾ ತೆರೆಗೆ ಬರಲಿದೆ ಎಂದು ಹಬ್ಬಿದ್ದ ವದಂತಿಗಳು ಸಂಪೂರ್ಣ ಸುಳ್ಳು ಎಂಬ ಅಸಲಿ ಸತ್ಯ ಬಹಿರಂಗವಾಗಿದೆ.
ವದಂತಿಗಳಿಗೆ ತೆರೆ ಎಳೆದ ಚಿತ್ರತಂಡ: ಸೆನ್ಸಾರ್ ಪ್ರಕ್ರಿಯೆ ಬಾಕಿ
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ‘ಜನನಾಯಗನ್’ ಚಿತ್ರಕ್ಕೆ ಇನ್ನೂ ಯಾವುದೇ ಸೆನ್ಸಾರ್ ಪ್ರಮಾಣಪತ್ರ ಲಭ್ಯವಾಗಿಲ್ಲ ಎಂದು ಚಿತ್ರತಂಡದ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ. ಸದ್ಯಕ್ಕೆ ಸಿನಿಮಾ ಮಂಡಳಿಯ ಅನುಮೋದನೆಗಾಗಿ ಕಾಯುತ್ತಿದ್ದು, ಮುಂದಿನ ವಾರದೊಳಗೆ ಸೆನ್ಸಾರ್ ಪ್ರಕ್ರಿಯೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸೆನ್ಸಾರ್ ಮಂಡಳಿಯಿಂದ ಅಧಿಕೃತ ಪ್ರಮಾಣಪತ್ರ ಸಿಕ್ಕ ಬಳಿಕವಷ್ಟೇ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಹಿಂದೆ ಹಬ್ಬಿದ್ದ ಸುದ್ದಿಗಳ ಪ್ರಕಾರ, ಚಿತ್ರಕ್ಕೆ ಕೆಲವು ಕಟ್‌ಗಳನ್ನು ಸೂಚಿಸಿ ‘ಎ’ ಸರ್ಟಿಫಿಕೇಟ್ ನೀಡಲಾಗಿದೆ ಮತ್ತು ಜುಲೈ 16, 24 ಅಥವಾ 31 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಈ ಯಾವುದೇ ದಿನಾಂಕಗಳಿಗೆ ಅಧಿಕೃತ ಆಧಾರವಿಲ್ಲ ಎಂದು ತಿಳಿದುಬಂದಿದೆ.
ರಿಲೀಸ್ ಮುನ್ನವೇ ಲೀಕ್: ಆನ್‌ಲೈನ್‌ನಲ್ಲಿ ಕೋಟಿಗೂ ಹೆಚ್ಚು ವೀಕ್ಷಣೆ!
ಚಿತ್ರಮಂದಿರಕ್ಕೆ ಬರುವ ಮುನ್ನವೇ ‘ಜನನಾಯಗನ್’ ಸಿನಿಮಾಗೆ ಪೈರಸಿ ಕಾಟ ಶುರುವಾಗಿದ್ದು, ಚಿತ್ರತಂಡಕ್ಕೆ ಭಾರಿ ಆಘಾತ ಉಂಟಾಗಿದೆ. ಏಪ್ರಿಲ್ 9 ರಂದೇ ಆನ್‌ಲೈನ್‌ನಲ್ಲಿ ಈ ಸಿನಿಮಾ ಲೀಕ್ ಆಗಿದ್ದು, ಬರೋಬ್ಬರಿ 1.20 ಕೋಟಿಗೂ ಹೆಚ್ಚು ಜನ ಕಾನೂನುಬಾಹಿರವಾಗಿ ಈ ಚಿತ್ರವನ್ನು ವೀಕ್ಷಿಸಿದ್ದಾರೆ ಎಂದು ಚೆನ್ನೈ ಪೊಲೀಸರು ಮದ್ರಾಸ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಈ ಪೈರಸಿ ಜಾಲವನ್ನು ಭೇದಿಸಿರುವ ಪೊಲೀಸರು ಈಗಾಗಲೇ 21 ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಸ್ಟಾರ್ ತಾರಾಗಣದ ‘ಜನನಾಯಗನ್’
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಎಚ್. ವಿನೋದ್ ನಿರ್ದೇಶಿಸಿದ್ದಾರೆ. ತೆಲುಗಿನ ಸೂಪರ್ ಹಿಟ್ ‘ಭಗವಂತ್ ಕೇಸರಿ’ ಚಿತ್ರದ ಸ್ಪೂರ್ತಿಯಿಂದ ಈ ಸಿನಿಮಾ ಮೂಡಿಬಂದಿದೆ ಎನ್ನಲಾಗಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದು, ವಿಜಯ್ ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ (ಕಾಯಲ್ ಪಾತ್ರದಲ್ಲಿ) ಮತ್ತು ಮಲಯಾಳಂ ಬೆಡಗಿ ಮಮಿತಾ ಬೈಜು (ವಿಜಯಲಕ್ಷ್ಮಿ ಪಾತ್ರದಲ್ಲಿ) ನಟಿಸಿದ್ದಾರೆ.