ಬೆಂಗಳೂರು: ಕಾಂಗ್ರೆಸ್ ನಮ್ಮ ತಾಯಂದಿರು ಹಾಗೂ ಸೋದರಿಯರನ್ನು ಕೇವಲ ಸಗಣಿ ಬಾಚಲು ಬಿಟ್ಟಿತ್ತು. ಆದರೆ ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂ. ಸಬ್ಸಿಡಿ ಕೊಟ್ಟು ಗ್ರಾಮೀಣ ಕುಟುಂಬಗಳ ಬದುಕನ್ನು ಸಮೃದ್ದಗೊಳಿಸಿತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಅಮುಲ್ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ನಂದಿನಿ ಈಗಾಗಲೇ 12 ರಾಜ್ಯಗಳಲ್ಲಿ ವಹಿವಾಟು ನಡೆಸುತ್ತಿದ್ದು, ಇನ್ನೂ ಹೆಚ್ಚು ರಾಜ್ಯಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಿದೆ ಎಂದಿದ್ದಾರೆ.
ಟ್ವೀಟ್ ಮೂಲಕ ಮಾತ್ರವಲ್ಲದೇ ನೇರವಾಗಿಯೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿ.ಟಿ.ರವಿ, ಕಾಂಗ್ರೆಸ್ ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕ ಗುಲಾಮಗಿರಿಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಭಾರತದ ಅಮುಲ್ ಬ್ರ್ಯಾಂಡ್ ಮಾರಾಟಕ್ಕೆ ಮಾತ್ರ ಯಾಕೆ ತೊಂದರೆ ಎಂದರು. ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಸೋತವರ ಗುಂಪು ಎಂದು ಟೀಕಿಸಿದರು.