ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೋತ ತಕ್ಷಣ ಆಯೋಗದ ಮೇಲೆ ದೂರು ಸಲ್ಲಿಸಲು, ನ್ಯಾಯ ಸಮ್ಮತ ಚುನಾವಣೆ ಆಗಿಲ್ಲ ಎನ್ನುವುದು ಹೀಗೆ ಚುನಾವನಾ ವ್ಯವಸ್ಥೆ ಮೇಲೆ ದೂರುವಂತಹ ಎಲ್ಲಾ ಹೇಳಿಕೆಗಳನ್ನು ಸಿದ್ಧವಾಗಿಕೊಟ್ಟುಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಲು ನಮ್ಮದು ಕಾಂಗ್ರೆಸ್ ಸರ್ಕಾರವಲ್ಲ. ಎಲ್ಲರಿಗೂ ನ್ಯಾಯ ಕೊಡುತ್ತೇವೆ. ಚುನಾವಣೆ ಸಂದರ್ಭದಲ್ಲಿ ಕೆಲವರು ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಾರೆ. ಸದಾಶಿವ ಆಯೋಗ ನಿಗದಿ ಮಾಡಿದ್ದೇ 3 ಪರ್ಸೆಂಟ್, ನಾವು ಕೊಟ್ಟಿರೋದು ನಾಲ್ಕುವರೆ ಪರ್ಸೆಂಟ್. ಹಿಂದಿನ ಕಾಂಗ್ರೆಸ್ ಸರ್ಕಾರ 2.50ಯಿಂದ 3 ಪರ್ಸೆಂಟ್ ಕೊಡಬೇಕೆಂದು ಡ್ರಾಫ್ಟ್ ರೆಡಿ ಮಾಡಿತ್ತು ಎಂದು ಹೇಳಿದರು.
ಯಾರಿಗಾದರೂ ಅನ್ಯಾಯವಾಗಿದೆ ಎನಿಸಿದರೆ ನ್ಯಾಯ ಕೊಡಲು ಬಿಜೆಪಿ ಸರ್ಕಾರ ಬದ್ಧವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಬಂಜಾರ-ಭೋವಿ ಸಮಾಜ ಬಿಜೆಪಿ ಜೊತೆಗಿದೆ, ನಾವು ಅವರ ಜೊತೆಗಿದ್ದೇವೆ. ಯಾರನ್ನು ಬಿಟ್ಟು ಕೊಡುವುದಿಲ್ಲ, ಯಾರನ್ನು ಕಡೆಗಣಿಸುವುದೂ ಇಲ್ಲ ಎಂದು ಹೇಳಿದರು.
ಬಿಜೆಪಿಗೆ ಚುನಾವಣೆ ತಯಾರಿ ಅವಶ್ಯಕತೆಯಿಲ್ಲ
ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆ ಬಗ್ಗೆ ಮಾತನಾಡಿದ ಅವರು, ನಿರಂತರ ಕೆಲಸ ಮಾಡಿದವರು ಚುನಾವಣೆ ಸಂದರ್ಭದಲ್ಲಿ ಹೆಚ್ಚು ಕೆಲಸ ಮಾಡುವ ಅವಶ್ಯಕತೆ ಇಲ್ಲ. ಅಂದಿನ ಪಾಠ ಅಂದೆ ಓದುವ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ತಯಾರಾಗುವ ಅವಶ್ಯಕತೆ ಇಲ್ಲ. ಬಿಜೆಪಿ ಕೂಡ 365 ದಿನ ಜನಗಳ ಜೊತೆ ಇದ್ದು ಕೆಲಸ ಮಾಡಿದೆ. ಹಾಗಾಗಿ, ಚುನಾವಣೆಗೆ ಎಂದು ವಿಶೇಷವಾದ ತಯಾರಿ ಮಾಡುವ ಅವಶ್ಯಕತೆ ಬರುವುದಿಲ್ಲ. ಈ ಬಾರಿ ಬಹಳ ವಿಶ್ವಾಸದಿಂದ ಚುನಾವಣೆ ಎದುರಿಸುತ್ತೇವೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.