ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆರಂಭವಾದ ಜೆಡಿಎಸ್‌ನ ಮಹತ್ವಾಕಾಂಕ್ಷಿ ಪಂಚರತ್ನ ರಥಯಾತ್ರೆ ಇಂದು ಸಮಾರೋಪಗೊಳ್ಳುತ್ತಿದ್ದು, ಕಾರ್ಯಕ್ರಮದಲ್ಲಿ ಜನಸಾಗರವೇ ಸೇರಿದೆ.
ಮೈಸೂರಿನ ಉತ್ತನಹಳ್ಳಿ ರಿಂಗ್ ರಸ್ತೆಯ ನೂರು ಎಕರೆ ಪ್ರದೇಶದ ವಿಶಾಲ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಜಿ.ಟಿ.ದೇವೇಗೌಡರು ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಎಲ್ಲ ಅಭ್ಯರ್ಥಿಗಳು ಪಾಲ್ಗೊಂಡಿದ್ದಾರೆ.
ನಾಡಿನ ಮೂಲೆ ಮೂಲೆಗಳಿಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಂಡೋಪ ತಂಡವಾಗಿ ಆಗಮಿಸಿದ್ದಾರೆ. . ಜೆಡಿಎಸ್ ಬಾವುಟ ಹಿಡಿದು, ಕೊರಳಲ್ಲಿ ಪಕ್ಷದ ಶಾಲು ಹಾಕಿಕೊಂಡು ಜೈಘೋಷ ಕೂಗುತ್ತಾ ವೇದಿಕೆಯತ್ತ ಕಾರ್ಯಕರ್ತರು ಆಗಮಿಸುತ್ತಿ ದ್ದರು. ರಾಜ್ಯ ವಿವಿಧ ಜಿಲ್ಲೆಗಳಿಂದ ಬಸ್, ಕಾರು, ಜೀಪು ಸೇರಿದಂತೆ ವಿವಿಧ ವಾಹನಗಳ ಮೂಲಕ ಸಮಾವೇಶಕ್ಕೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ವಿಶಾಲ ಮೈದಾನದಲ್ಲಿ ಲಕ್ಷಂತರ ಮಂದಿ ನೆರದಿದ್ದಾರೆ
100×50 ಅಡಿಯ ವಿಶಾಲ ವೇದಿಕೆ, ಮೈದಾನದ ಯಾವುದೇ ಭಾಗದಿಂದಲೂ ವೇದಿಕೆ ಕಾರ್ಯಕ್ರಮ ನೋಡಲು ಸಾಧ್ಯ ಆಗುವಂತೆ ಬೃಹತ್ ಎಲ್ ಇ ಡಿ ಪರದೆಗಳನ್ನು ಅಳವಡಿಸಲಾಗಿದೆ.
ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದ ಮೂಲಕ ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದು, ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಜೆಡಿಎಸ್ ಶಕ್ತಿ, ಸಾಮರ್ಥ್ಯದ ಅನಾವರಣವಾಗಿದೆ.