ನವದೆಹಲಿ: ಕೆಲವೊಬ್ಬ ನಿವೃತ್ತ ನ್ಯಾಯಾಧೀಶರು ‘ಭಾರತ ವಿರೋಧಿ’ ಗುಂಪುಗಳ ಭಾಗವಾಗಿದ್ದಾರೆ ಎಂಬ ಹೇಳಿಕೆಯನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹಿಂಪಡೆಯುವಂತೆ ದೇಶಾದ್ಯಂತ 300ಕ್ಕೂ ಹೆಚ್ಚು ವಕೀಲರು ಪತ್ರ ಬರೆದಿದ್ದಾರೆ.
“ನ್ಯಾಯಾಂಗ ವ್ಯವಸ್ಥೆಯನ್ನು ಎತ್ತಿಹಿಡಿಯಲು ತಮ್ಮ ಜೀವನ ಮುಡಿಪಾಗಿಟ್ಟವರ ಬಗ್ಗೆ ದೇಶವಿರೋಧಿ ಎಂಬ ಆರೋಪ ಮಾಡುವುದು ನಮ್ಮ ದೇಶದ ಸಾಮಾಜಿಕ ಸುವ್ಯವಸ್ಥೆ ಹಾದಿತಪ್ಪಿರುವುದನ್ನು ತೋರಿಸುತ್ತಿದೆ” ಎಂದು ಪತ್ರದಲ್ಲಿ ಬರೆಯಲಾಗಿದೆ.
“ಸಚಿವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಸರಕಾರದ ವಿರುದ್ಧದ ಟೀಕೆಗಳು ದೇಶದ ವಿರುದ್ಧ ಅಲ್ಲ, ದೇಶವಿರೋಧಿಯೂ ಅಲ್ಲ ಎಂದು ನಾವು ನೆನಪಿಸುತ್ತಿದ್ದೇವೆ. ಅಧಿಕಾರದಲ್ಲಿರುವ ಸರಕಾರವೆಂದರೆ ದೇಶವಲ್ಲ, ದೇಶವೆಂದರೆ ಸರಕಾರವಂತೂ ಅಲ್ಲ” ಎಂದು ಪತ್ರದಲ್ಲಿ ಬರೆಯಲಾಗಿದೆ.