Thursday, July 16, 2026
Homeಕ್ರೀಡೆCRISTIANO RONALDO : ಇದೇ ನನ್ನ ಕೊನೆಯ ವಿಶ್ವಕಪ್ - ನಿವೃತ್ತಿ ವದಂತಿ ಖಚಿತಪಡಿಸಿದ ರೊನಾಲ್ಡೊ!

CRISTIANO RONALDO : ಇದೇ ನನ್ನ ಕೊನೆಯ ವಿಶ್ವಕಪ್ – ನಿವೃತ್ತಿ ವದಂತಿ ಖಚಿತಪಡಿಸಿದ ರೊನಾಲ್ಡೊ!

ಫ್ಲೋರಿಡಾ: ಫುಟ್‌ಬಾಲ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಪೋರ್ಚುಗಲ್‌ನ ಸ್ಟಾರ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ತಮ್ಮ ನಿವೃತ್ತಿ (Retirement) ಹಾಗೂ ಭವಿಷ್ಯದ ಕುರಿತು ಎದ್ದಿದ್ದ ಭಾರಿ ಊಹಾಪೋಹಗಳಿಗೆ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ಪ್ರಸಕ್ತ ಸಾಲಿನ 2026ರ ಫಿಫಾ ವಿಶ್ವಕಪ್ (Fifa World Cup) ಟೂರ್ನಿಯು ನನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಪಂದ್ಯಾವಳಿಯಾಗಲಿದೆ ಎಂದು ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ಬಲಿಷ್ಠ ಸ್ಪೇನ್ ತಂಡದ ವಿರುದ್ಧ ನಡೆಯಲಿರುವ ಮಹತ್ವದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 41 ವರ್ಷದ ರೊನಾಲ್ಡೊ, ಇದು ನನ್ನ ಪಾಲಿನ ಕೊನೆಯ ವಿಶ್ವಕಪ್ ಆಗಿರುವುದರಿಂದ ಇದರ ಪ್ರತಿಯೊಂದು ಕ್ಷಣವನ್ನೂ ಆನಂದಿಸಲು ಬಯಸುತ್ತೇನೆ. ಆದರೆ, ನಾಳೆಯ ಸ್ಪೇನ್ ವಿರುದ್ಧದ ಪಂದ್ಯವೇ ವಿಶ್ವಕಪ್‌ನಲ್ಲಿ ನನ್ನ ವೃತ್ತಿಜೀವನದ ಕೊನೆಯ ಪಂದ್ಯವಾಗದಿರಲಿ ಎಂದು ಆಶಿಸುತ್ತೇನೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

ಪ್ರಸಕ್ತ 2026ರ ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ ಅದ್ಭುತ ಫಾರ್ಮ್‌ನಲ್ಲಿರುವ ರೊನಾಲ್ಡೊ ಪೋರ್ಚುಗಲ್ ಪರ 3 ಪ್ರಮುಖ ಗೋಲುಗಳನ್ನು ಬಾರಿಸಿ ಮಿಂಚಿದ್ದಾರೆ. ತಂಡವು ಈ ಬಾರಿ ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ದೃಢ ಭರವಸೆಯೊಂದಿಗೆ ಅಖಾಡಕ್ಕಿಳಿದಿದೆ ಎಂದಿರುವ ಅವರು, ನಾಳಿನ ಸ್ಪೇನ್ ವಿರುದ್ಧದ ಹೈವೋಲ್ಟೇಜ್ ಪಂದ್ಯವನ್ನು ಎದುರಿಸಲು ತಮ್ಮ ತಂಡ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ತಮ್ಮ ನಿವೃತ್ತಿಯ ಕುರಿತು ಮಾಧ್ಯಮಗಳು ಪದೇ ಪದೇ ಕೇಳುತ್ತಿರುವ ಪ್ರಶ್ನೆಗಳಿಗೆ ತೀವ್ರ ಅಸಮಾಧಾನ ಹೊರಹಾಕಿದ ರೊನಾಲ್ಡೊ, ನಾನು ಯಾವಾಗ ಫುಟ್‌ಬಾಲ್‌ಗೆ ವಿದಾಯ ಹೇಳಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ, ಅದನ್ನು ಬೇರೆಯವರು ನಿರ್ದೇಶಿಸಲು ಸಾಧ್ಯವಿಲ್ಲ. ಪದೇ ಪದೇ ಇದೇ ಪ್ರಶ್ನೆಯನ್ನು ಕೇಳಿ ಸಮಯ ವ್ಯರ್ಥ ಮಾಡುವ ಬದಲು, ಸದ್ಯಕ್ಕೆ ದೇಶಕ್ಕಾಗಿ ಅತ್ಯುತ್ತಮ ಪ್ರದರ್ಶನ ನೀಡುವುದರ ಕಡೆಗೆ ಮಾತ್ರ ನನ್ನ ಸಂಪೂರ್ಣ ಗಮನ ನೆಟ್ಟಿದೆ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಮೆಸ್ಸಿ ದಾಖಲೆಯ ಬೆನ್ನಟ್ಟಿದ ರೊನಾಲ್ಡೊ:

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ವಿಶ್ವದ ದಿಗ್ಗಜ ಆಟಗಾರರ ಪಟ್ಟಿಯಲ್ಲಿ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅಗ್ರಸ್ಥಾನದಲ್ಲಿದ್ದರೆ, ಅವರ ನಂತರದ ಸ್ಥಾನದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಇದ್ದಾರೆ. ಮೆಸ್ಸಿ ಇದುವರೆಗೆ ಒಟ್ಟು 30 ವಿಶ್ವಕಪ್ ಪಂದ್ಯಗಳನ್ನು ಆಡಿದ್ದರೆ, ರೊನಾಲ್ಡೊ 26 ಪಂದ್ಯಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.

ಇನ್ನು ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಸಾಲಿನಲ್ಲಿಯೂ ಮೆಸ್ಸಿ 20 ಗೋಲುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ರೊನಾಲ್ಡೊ ಪ್ರಸಕ್ತ ಟೂರ್ನಿಯ 3 ಗೋಲುಗಳು ಸೇರಿದಂತೆ ಒಟ್ಟು 11 ಗೋಲುಗಳ ಸಾಧನೆ ಮಾಡಿದ್ದಾರೆ. ತಮ್ಮ ವೃತ್ತಿಜೀವನದ ಈ ಅಂತಿಮ ವಿಶ್ವಕಪ್ ಟೂರ್ನಿಯಲ್ಲಿ ಪೋರ್ಚುಗಲ್‌ಗೆ ವಿಶ್ವವಿಜೇತ ಪಟ್ಟ ತಂದುಕೊಡಬೇಕೆಂಬ ಹಠದೊಂದಿಗೆ ರೊನಾಲ್ಡೊ ಮೈದಾನಕ್ಕಿಳಿಯುತ್ತಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!