ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರದಲ್ಲಿ ಸುಮಾರು ಒಂದು ವರ್ಷದ ಹಿಂದೆ ನಡೆದಿದ್ದ ಅಪ್ರಾಪ್ತ ಬಾಲಕಿಯ ನಿಗೂಢ ನಾಪತ್ತೆ ಪ್ರಕರಣಕ್ಕೆ ಬೆಚ್ಚಿಬೀಳಿಸುವ (Crime) ತಿರುವು ಸಿಕ್ಕಿದೆ. ಪಿಜಿಯಲ್ಲಿ (PG) ಕೆಲಸಕ್ಕಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಾಗ, ಅದರಿಂದ ತಮಗೆ ಎಲ್ಲಿ ಕೆಟ್ಟ ಹೆಸರು ಬಂದು ಮರ್ಯಾದೆ ಹೋಗುತ್ತದೆಯೋ ಎಂಬ ಭೀತಿಯಿಂದ ಶವವನ್ನು ದೊಡ್ಡ ಸೂಟ್‌ಕೇಸ್‌ನಲ್ಲಿ ತುಂಬಿ ಪ್ರಪಾತಕ್ಕೆ ಎಸೆದು ಬಂದಿದ್ದ ಕರಾಳ ಸತ್ಯ ಒಂದು ವರ್ಷದ ಬಳಿಕ ಪೊಲೀಸರ ತನಿಖೆಯಿಂದ ಬಯಲಾಗಿದೆ.
ಈ ಸಾಕ್ಷಿ ನಾಶ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಇಟ್ಟಿಗೆಹಳ್ಳಿಯ ಮುದ್ದನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಗಂಗಾನಾಯ್ಕ, ಆತನ ಎರಡನೇ ಪತ್ನಿ ಸೌಭಾಗ್ಯ ಅಲಿಯಾಸ್ ಭಾಗ್ಯಶ್ರೀ, ರಂಜಿತಾ ಮತ್ತು ಪೀರಾನಾಯ್ಕ ಎಂಬ ನಾಲ್ವರು ಆರೋಪಿಗಳನ್ನು ಶಿಕಾರಿಪುರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ತಾಯಿ ಇಲ್ಲದ ಬಾಲಕಿಗೆ ಆಶ್ರಯ ಕೊಟ್ಟಿದ್ದ ಪಿಜಿ
ಮೃತಪಟ್ಟ ಅಪ್ರಾಪ್ತ ಬಾಲಕಿ ಸಂಗೀತಾಗೆ ತಾಯಿ ಇರಲಿಲ್ಲ. ತಂದೆಯ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಆಕೆ ಕೆಲಸ ಹುಡುಕಿಕೊಂಡು ಶಿಕಾರಿಪುರಕ್ಕೆ ಬಂದು ಸೌಭಾಗ್ಯ ನಡೆಸುತ್ತಿದ್ದ ಪಿಜಿ ಸೇರಿಕೊಂಡಿದ್ದಳು. 8ನೇ ತರಗತಿಯ ನಂತರ ಓದು ನಿಲ್ಲಿಸಿದ್ದ ಸಂಗೀತಾನನ್ನು, ಸೌಭಾಗ್ಯ ಮೊದಮೊದಲು ಮಗಳಂತೆ ಸಾಕಿ ಸಲುಹುತ್ತಿದ್ದಳಾದರೂ, ನಂತರ ಆಕೆ ಅದೇ ಪಿಜಿಯಲ್ಲಿ ಕೆಲಸದಾಳಾಗಿ ಮುಂದುವರಿದಿದ್ದಳು.
ಕಳೆದ 2025ರ ಮೇ 18ರಂದು ಪಿಜಿಯಲ್ಲಿದ್ದ ರಂಜಿತಾ ಎಂಬಾಕೆಯೊಂದಿಗೆ ಬಾಲಕಿ ಸಂಗೀತಾಗೆ ಸಣ್ಣ ಜಗಳವಾಗಿತ್ತು. ಬಾಲಕಿಯು ಎಲ್ಲರ ಹತ್ತಿರ ಒಬ್ಬರ ಮೇಲೊಬ್ಬರು ಚಾಡಿ ಹೇಳಿ ನಮ್ಮ ಮರ್ಯಾದೆ ತೆಗೆಯುತ್ತಿದ್ದಾಳೆ ಎಂದು ಆರೋಪಿಗಳು ಆಕ್ಷೇಪಿಸಿದ್ದರು. ಇದೇ ವಿಚಾರವಾಗಿ ಪಿಜಿ ಕೆಳಗಿರುವ ಬ್ಯೂಟಿ ಪಾರ್ಲರ್‌ಗೆ ಬಾಲಕಿಯನ್ನು ಕರೆಸಿಕೊಂಡ ಆರೋಪಿಗಳು, ಆಕೆಯನ್ನು ಹೆದರಿಸಿ, ದೈಹಿಕ ಹಾಗೂ ಮಾನಸಿಕವಾಗಿ ಹಲ್ಲೆ ನಡೆಸಿದ್ದರು. ಇದರಿಂದ ಮನನೊಂದ ಬಾಲಕಿ ಸಂಗೀತಾ, ಅಂದೇ ಪಿಜಿಯ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.
ಮರ್ಯಾದೆಗೆ ಹೆದರಿ ಸೂಟ್‌ಕೇಸ್ ಡೆಡ್‌ಬಾಡಿ ಡೀಲ್
ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಹೆದರಿದ ಪಿಜಿ ಮಾಲೀಕರು ಮತ್ತು ಅವರ ಸ್ನೇಹಿತರು, ಪೊಲೀಸರಿಗೆ ವಿಷಯ ತಿಳಿಸಿದರೆ ಕಾನೂನಿನ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಸಾಕ್ಷಿ ನಾಶದ ಸ್ಕೆಚ್ ರೂಪಿಸಿದರು. ಬಾಲಕಿಯ ಮೃತದೇಹವನ್ನು ಯಾರಿಗೂ ತಿಳಿಯದಂತೆ ಒಂದು ದೊಡ್ಡ ಸೂಟ್‌ಕೇಸ್ ಒಳಗೆ ಪ್ಯಾಕ್ ಮಾಡಿದರು. ಬಳಿಕ ಆ ಸೂಟ್‌ಕೇಸ್ ಅನ್ನು ಕಾರಿನಲ್ಲಿ ಇಟ್ಟುಕೊಂಡು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಾವಿನಗುಂಡಿ (ಜೋಗ ಜಲಪಾತದ ಸಮೀಪ) ಪ್ರಪಾತಕ್ಕೆ ಎಸೆದು ಯಾರಿಗೂ ಅನುಮಾನ ಬಾರದಂತೆ ವಾಪಸ್ ಬಂದಿದ್ದರು. ಈ ಘಟನೆ ನಡೆದು ಒಂದು ವರ್ಷದವರೆಗೂ ಬಾಲಕಿ ಜೀವಂತವಾಗಿದ್ದಾಳೆ ಎಂದು ಎಲ್ಲರನ್ನು ನಂಬಿಸಲು ಆಕೆಯ ಮೊಬೈಲ್ ಫೋನ್ ಅನ್ನು ಯಾರಿಗೂ ಸಿಗದಂತೆ ಬಚ್ಚಿಟ್ಟಿದ್ದರು.
ರಂಜಿತಾ-ಪೀರಾ ನಾಯ್ಕ ಜಗಳದಿಂದ ಬಯಲಾದ ರಹಸ್ಯ!
ಕಳೆದ ಒಂದು ವರ್ಷದಿಂದ ಗೌಪ್ಯವಾಗಿದ್ದ ಈ ರಹಸ್ಯ, ಇತ್ತೀಚೆಗೆ ಆರೋಪಿಗಳಾದ ರಂಜಿತಾ ಹಾಗೂ ಪೀರಾನಾಯ್ಕ ನಡುವೆ ನಡೆದ ವೈಯಕ್ತಿಕ ಜಗಳದಿಂದಾಗಿ ಬೀದಿಗೆ ಬಂದಿದೆ. ಜಗಳದ ವೇಳೆ ಈ ಸತ್ಯಾಂಶ ಹೊರಬೀಳುತ್ತಿದ್ದಂತೆ, ಕಳೆದ ಶುಕ್ರವಾರ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಕೊನೆಯದಾಗಿ ಬಾಲಕಿ ಜೊತೆ ಸಂಪರ್ಕದಲ್ಲಿದ್ದ ರಂಜಿತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.
ಎಫ್‌ಎಸ್‌ಎಲ್ (FSL) ತನಿಖೆಗೆ ಸಿಕ್ಕ ಅವಶೇಷಗಳು
ಈ ಕುರಿತು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ (SP) ನಿಖಿಲ್ ಅವರು, ಬಾಲಕಿ ಆತ್ಮಹತ್ಯೆ ಮಾಡಿಕೊಂಡ ತಕ್ಷಣ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರೆ ಇದು ಇಷ್ಟು ದೊಡ್ಡ ಕ್ರಿಮಿನಲ್ ಕೇಸ್ ಆಗುತ್ತಿರಲಿಲ್ಲ. ಆದರೆ ಶವ ವಿಲೇವಾರಿ ಮಾಡಿ ಮುಚ್ಚಿಟ್ಟಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಮಾವಿನಗುಂಡಿ ಪ್ರಪಾತದಲ್ಲಿ ನಮ್ಮ ಸಿಬ್ಬಂದಿ ಶೋಧ ನಡೆಸಿದಾಗ ಬಾಲಕಿಯ ಶವದ ಕೆಲವು ಭಾಗಗಳು (ಅಸ್ಥಿಪಂಜರದ ಅವಶೇಷಗಳು) ಪತ್ತೆಯಾಗಿವೆ. ಅವು ಮೃತ ಬಾಲಕಿಯದ್ದೇ ಎಂದು ವೈಜ್ಞಾನಿಕವಾಗಿ ದೃಢಪಡಿಸಿಕೊಳ್ಳಲು ತಕ್ಷಣವೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಚಾಟ್‌ಜಿಪಿಟಿ ಬಳಸಿ 46,000ಕ್ಕೂ ಹೆಚ್ಚು ಅನಿಮೆ ಖಾತೆಗಳನ್ನುಹ್ಯಾಕ್ ಮಾಡಿದ 15ರ ಬಾಲಕ ಅರೆಸ್ಟ್!