ಮೈಸೂರು : ಇನ್ಸ್ಸ್ಟಾಗ್ರಾಂ ಮೂಲಕ ಯುವತಿಯನ್ನು ಪರಿಚಯ ಮಾಡಿಕೊಂಡು ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾದ ವಿವಾಹಿತ ಯುವಕನೋರ್ವನ ಬರ್ಬರ ಹತ್ಯೆಯಾಗಿದೆ.
ಮೈಸೂರು ತಾಲೂಕಿನ ಅನುಗನಹಳ್ಳಿಯಲ್ಲಿರುವ ತೋಟವೊಂದರಲ್ಲಿ ಈ ಕೊಲೆ ನಡೆದಿದ್ದು, ಸೂರ್ಯ ಎಂಬುವವನ ಭೀಕರ ಹತ್ಯೆ ಮಾಡಲಾಗಿದೆ.
ಪತಿಯ ಅಕ್ರಮ ಸಂಬಂಧದಿಂದ ಬೇಸತ್ತು, ಹತನಾದ ಸೂರ್ಯನ ಪತ್ನಿ ಮತ್ತವರ ತಾಯಿ ಕೆಲ ದಿನಗಳ ಹಿಂದೆ ಮನೆಯನ್ನು ತೊರೆದಿದ್ದರು. ಇತ್ತೀಚೆಗೆ ಸೂರ್ಯ ಯುವತಿಯೊಂದಿಗಿನ ಸಂಬಂಧದ ಖಾಸಗಿ ಫೋಟೋವನ್ನು ವಾಟ್ಸಪ್ ಸ್ಟೇಟಸ್ ಇಟ್ಟಿದ್ದನಂತೆ.
ಅಲ್ಲದೇ ಮೃತ ಸೂರ್ಯನಿಗೆ ಹಣ ಮತ್ತು ಆಸ್ತಿ ನೀಡುವಂತೆ ಯುವತಿ ಪೀಡಿಸುತ್ತಿದ್ದಳು ಎನ್ನಲಾಗಿದೆ. ಕಳೆದ ರಾತ್ರಿ ಯುವತಿಯೊಂದಿಗೆ ತೋಟದಲ್ಲಿದ್ದ ಸೂರ್ಯ, ಇಂದು ಬೆಳಗಿನ ಜಾವ ಕೊಲೆಯಾಗಿದ್ದಾನೆ. ಕೊಲೆ ಹಿಂದೆ ಆ ಯುವತಿಯ ಕೈವಾಡವಿದೆ ಎಂದು ಸೂರ್ಯನ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.