ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಪಬ್ ಒಂದರಲ್ಲಿ ಅಬಕಾರಿ ಇಲಾಖೆಯ ಇನ್‌ಸ್ಪೆಕ್ಟರ್ ಒಬ್ಬರು ಮದ್ಯದ ಅಮಲಿನಲ್ಲಿ ಸೃಷ್ಟಿಸಿರುವ (Bengaluru) ಭಾರೀ ಹಂಗಾಮಾ (Crime) ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕರಲ್ಲಿ ಶಿಸ್ತು ಕಾಪಾಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು, ಕುತ್ತಿಗೆಗೆ ಇಲಾಖೆಯ ಅಧಿಕೃತ ಗುರುತಿನ ಚೀಟಿ (ಐಡಿ ಕಾರ್ಡ್) ಧರಿಸಿಕೊಂಡೇ ಪಬ್‌ನಲ್ಲಿ ದಾಂಧಲೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಸಬ್ ಡಿವಿಷನ್ 11 ರಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಇನ್‌ಸ್ಪೆಕ್ಟರ್ ಮಲ್ಲಪ್ಪ ಎಸ್. ಕುಂದಗೋಳ ಅವರ ಮೇಲೆಯೇ ಈ ಉದ್ಧಟತನದ ವರ್ತನೆಯ ಆರೋಪ ಕೇಳಿಬಂದಿದೆ.
ಆಗಿದ್ದೇನು?
ನಗರದ ಜೆ.ಪಿ. ನಗರದಲ್ಲಿರುವ ಪ್ರಸಿದ್ಧ ‘ಪಂಪ್ ಹೌಸ್’ ಪಬ್‌ಗೆ ಇತ್ತೀಚೆಗೆ ಭೇಟಿ ನೀಡಿದ್ದ ಮಲ್ಲಪ್ಪ ಅವರು ಕಂಠಪೂರ್ತಿ ಕುಡಿದು ಈ ರಾದ್ಧಾಂತ ಮಾಡಿದ್ದಾರೆ ಎನ್ನಲಾಗಿದೆ. ಮದ್ಯದ ಅಮಲು ತಲೆಗೇರುತ್ತಿದ್ದಂತೆ ಪಬ್‌ನಲ್ಲಿದ್ದ ಗ್ರಾಹಕರು ಹಾಗೂ ಸಾರ್ವಜನಿಕರ ಮೇಲೆ ದರ್ಪ ತೋರಲು ಆರಂಭಿಸಿದ ಇನ್‌ಸ್ಪೆಕ್ಟರ್, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ಜೊತೆಯೂ ವಿನಾಕಾರಣ ಜಗಳ ತೆಗೆದು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವರ್ತನೆಯನ್ನು ತಡೆಯಲು ಬಂದ ಪಬ್ ಮ್ಯಾನೇಜರ್‌ಗೆ ಅಧಿಕಾರಿಯು ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
ಕಠಿಣ ಕ್ರಮಕ್ಕೆ ಆಗ್ರಹ
ಇನ್‌ಸ್ಪೆಕ್ಟರ್ ಕಿರಿಕ್ ಮಿತಿಮೀರಿದಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪಬ್ ನೌಕರರು ತಕ್ಷಣ ತಮ್ಮ ಮೊಬೈಲ್ ಕ್ಯಾಮೆರಾಗಳನ್ನು ಆನ್ ಮಾಡಿ ಇಡೀ ಘಟನೆಯನ್ನು ಚಿತ್ರೀಕರಿಸಲು ಮುಂದಾಗಿದ್ದಾರೆ. ವಿಡಿಯೋ ರೆಕಾರ್ಡ್ ಆಗುತ್ತಿರುವುದನ್ನು ಗಮನಿಸುತ್ತಿದ್ದಂತೆಯೇ ತಬ್ಬಿಬ್ಬಾದ ಅಬಕಾರಿ ಅಧಿಕಾರಿ, ತಕ್ಷಣವೇ ತಮ್ಮ ಧಾಟಿಯನ್ನು ಬದಲಾಯಿಸಿ ಮೌನಕ್ಕೆ ಶರಣಾಗಿದ್ದಾರೆ. ಸದ್ಯ ಇನ್‌ಸ್ಪೆಕ್ಟರ್ ಮಲ್ಲಪ್ಪ ಕುಡಿದ ಮತ್ತಿನಲ್ಲಿ ಆಡಿರುವ ಹೈಡ್ರಾಮಾದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಇಲಾಖೆಯ ಮಾನ ಹರಾಜು ಹಾಕಿರುವ ಇಂತಹ ಬೇಜವಾಬ್ದಾರಿ ಅಧಿಕಾರಿಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಶಿಸ್ತುಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಕಾಮಗಾರಿ ಸ್ಥಳದಲ್ಲಿ ಅಕ್ರಮ ಸ್ಫೋಟಕ ಬಳಕೆ!- ಇಬ್ಬರು ಅರೆಸ್ಟ್
ಬೆಂಗಳೂರು: ಬೆಂಗಳೂರಿನ (Bengaluru) ಭೋಗನಹಳ್ಳಿಯ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕಾನೂನುಬಾಹಿರವಾಗಿ ಸ್ಫೋಟಕಗಳನ್ನು (Explosives) ಸಂಗ್ರಹಿಸಿ, ಬಳಸಿದ (Crime) ಆರೋಪದ ಮೇಲೆ ಬೆಳ್ಳಂದೂರು ಪೊಲೀಸರು ಇಬ್ಬರನ್ನು (Arrest) ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆವಲಪರ್ ಹಾಗೂ ಸೈಟ್ ಎಂಜಿನಿಯರ್ ಸೇರಿದಂತೆ ಒಟ್ಟು ಐದು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಬಂಧಿತರನ್ನು ಸುರಕ್ಷತಾ ಮೇಲ್ವಿಚಾರಕ ಅರುಣ್ ಕುಮಾರ್ ಮತ್ತು ಸೈಟ್ ಇನ್‌ಚಾರ್ಜ್ ಜಗನ್ ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಸೈಟ್ ಎಂಜಿನಿಯರ್ ಪ್ರಭಾಕರ್, ಆದರ್ಶ ಡೆವಲಪರ್ಸ್ ಮಾಲೀಕರು ಹಾಗೂ ಮತ್ತೊಬ್ಬ ಗುತ್ತಿಗೆದಾರನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ ಭ್ರಷ್ಟ ಎಂಜಿನಿಯರ್ಗೆ ಶಾಕ್ ನೀಡಿದ ಎಸಿಬಿ.. ದಾಳಿ ವೇಳೆ 5 ನಿವೇಶನ, ಕಂತೆ ಕಂತೆ ನೋಟು ಪತ್ತೆ!