Thursday, July 16, 2026
Homeಕ್ರೈಂCRIME: ಹೈದರಾಬಾದ್‌ನಲ್ಲಿ ಬೀದರ್ ಯುವಕನ ಅನುಮಾನಾಸ್ಪದ ಸಾ*ವು!

CRIME: ಹೈದರಾಬಾದ್‌ನಲ್ಲಿ ಬೀದರ್ ಯುವಕನ ಅನುಮಾನಾಸ್ಪದ ಸಾ*ವು!

ಹೈದರಾಬಾದ್‌: ಬೀದರ್ ಮೂಲದ ಯುವಕನೊಬ್ಬ ಹೈದರಾಬಾದ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಡವಾಗಿ (Crime) ಬೆಳಕಿಗೆ ಬಂದಿದ್ದು, ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿ ಆತ್ಮಹತ್ಯೆಯ ಕಥೆ ಕಟ್ಟಿದ್ದಾಳೆ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಏನಿದು ಪ್ರಕರಣ?
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಣಿಗೆಂಪುರ ಗ್ರಾಮದ ನಿವಾಸಿಯಾದ ದತ್ತಾತ್ರಿ ಲದ್ದಿ (28) ಎಂಬುವವರೇ ಮೃತಪಟ್ಟ ದುರ್ದೈವಿ. ಮಾರ್ಚ್ 24 ರಂದು ಹೈದರಾಬಾದ್‌ನ ಆಸಿಪ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಮೃತನ ಪೋಷಕರು ಮತ್ತು ಸಹೋದರಿ ತಮಗೆ ನ್ಯಾಯ ಕೊಡಿಸುವಂತೆ ಕರ್ನಾಟಕ ಪೊಲೀಸರ ಮೊರೆ ಹೋಗಿದ್ದಾರೆ.

ಜೀವನೋಪಾಯಕ್ಕಾಗಿ ಸುಮಾರು ಆರು ತಿಂಗಳ ಹಿಂದೆಯಷ್ಟೇ ದಂಪತಿ ಹೈದರಾಬಾದ್ ಪಟ್ಟಣಕ್ಕೆ ತೆರಳಿದ್ದರು. ನಿಜಾಂಶವೆಂದರೆ, ದತ್ತಾತ್ರಿಗೆ ಹೈದರಾಬಾದ್‌ಗೆ ಹೋಗುವುದು ಇಷ್ಟವಿರಲಿಲ್ಲ. ಆದರೆ ಆತನ ಪತ್ನಿಯೇ ಬಲವಂತ ಮಾಡಿ, ಒತ್ತಾಯಪೂರ್ವಕವಾಗಿ ಆತನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಳು ಎನ್ನಲಾಗಿದೆ. ಘಟನೆ ನಡೆಯುವ ಕೇವಲ ಎರಡು ದಿನಗಳ ಮುಂಚೆಯಷ್ಟೇ ಈ ದಂಪತಿ ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿಕೊಂಡು ಬಂದಿದ್ದರು. ಆದರೆ ಬಂದ ಎರಡೇ ದಿನದಲ್ಲಿ ದತ್ತಾತ್ರಿ ಶವವಾಗಿ ಪತ್ತೆಯಾಗಿದ್ದಾರೆ. ಪತಿಯ ಸಾವಿನ ಮರುದಿನವೇ, ಅಂದರೆ ಮಾರ್ಚ್ 25 ರಂದು ಆಕೆ ಪೊಲೀಸರ ಬಳಿ ಹೋಗಿ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ದಾಖಲಿಸಿದ್ದಾಳೆ. ಆದರೆ ಕುಟುಂಬಸ್ಥರ ಪ್ರಕಾರ, ಆರೋಪಿ ಮಹಿಳೆಗೆ ಬೇರೊಬ್ಬನ ಜೊತೆ ಅನೈತಿಕ ಸಂಬಂಧವಿದ್ದು, ಇದೇ ಕಾರಣಕ್ಕೆ ಆಕೆ ಪತಿಯನ್ನು ಸಂಚು ರೂಪಿಸಿ ಕೊಲೆ ಮಾಡಿದ್ದಾಳೆ.

ತೆಲಂಗಾಣ ಪೊಲೀಸರ ವಿರುದ್ಧ ಅಸಮಾಧಾನ
ಸುದ್ದಿಗೋಷ್ಠಿ ನಡೆಸಿ ಕಣ್ಣೀರು ಹಾಕಿದ ಮೃತನ ಸಹೋದರಿ ಹಾಗೂ ಪೋಷಕರು, ತೆಲಂಗಾಣ ಪೊಲೀಸರ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಯಾರೇ ನೋಡಿದರೂ ಇದು ಕೊಲೆ ಎಂದು ಹೇಳುವಷ್ಟರ ಮಟ್ಟಿಗೆ ದತ್ತಾತ್ರಿ ಮೈಮೇಲೆ ಹಲವು ಕಡೆ ಗಾಯದ ಗುರುತುಗಳಾಗಿವೆ. ಅಷ್ಟೇ ಅಲ್ಲದೆ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವವರು ಯಾರಾದರೂ ಸಂಪೂರ್ಣ ಬೆತ್ತಲೆಯಾಗಿ ಸಾಯುತ್ತಾರಾ? ಎಂದು ಕುಟುಂಬಸ್ಥರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ತೆಲಂಗಾಣ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಸಹೋದರನ ಸಾವಿನ ಹಿಂದಿರುವ ನಿಜವಾದ ರಹಸ್ಯ ಹೊರಬರಬೇಕು ಮತ್ತು ಆತನಿಗೆ ನ್ಯಾಯ ಸಿಗಬೇಕು ಎಂದು ಮೃತನ ಸಹೋದರಿ ಕಣ್ಣೀರಿಡುತ್ತಾ ಕರ್ನಾಟಕ ಪೊಲೀಸರಿಗೆ ಮನವಿ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ತಮಗೆ ಸೂಕ್ತ ಸ್ಪಂದನೆ ಸಿಗದ ಕಾರಣ, ಕರ್ನಾಟಕ ಸರ್ಕಾರ ಮತ್ತು ನಮ್ಮ ರಾಜ್ಯದ ಪೊಲೀಸರು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ ಮರುತನಿಖೆ ನಡೆಸುವಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಗಾಢ ನಿದ್ರೆಯಲ್ಲಿದ್ದ ಮಗುವಿನ ಹೊಟ್ಟೆಯ ಮೇಲೆ ಮಲಗಿದ ನಾಗರಹಾವು-VIDEO

ಹೆಚ್ಚಿನ ಸುದ್ದಿ

Change Language »
error: Content is protected !!