ಬೆಳಗಾವಿ: ಸಮಾಜ ಸೇವೆಯ ಹೆಸರಿನಲ್ಲಿ ಸಾರ್ವಜನಿಕರ ನಂಬಿಕೆ ಗಳಿಸಿ, ಅಡಗಿನಡಗೇ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ (Crime) ಹಣಕಾಸು ದಂಧೆ ನಡೆಸುತ್ತಿದ್ದ ಆರೋಪದ (Fraud) ಮೇಲೆ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ಅವರನ್ನು ಮಾಳಮಾರುತಿ ಠಾಣೆ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ.
ಕೋಟಿ ಕೋಟಿ ಲೂಟಿಯ ಸುಳಿವು
ಯಾವುದೇ ರೀತಿಯ ಸರ್ಕಾರಿ ನೋಂದಣಿ ಇಲ್ಲದೆ, ಕಾನೂನುಬಾಹಿರವಾಗಿ ಹಣಕಾಸು ವ್ಯವಹಾರ ನಡೆಸುತ್ತಿದ್ದ ಆರೋಪ ಶಿವಾನಂದ ಅವರ ಮೇಲಿದೆ. ಸಾರ್ವಜನಿಕರಿಗೆ ದೊಡ್ಡ ಲಾಭದ ಆಮಿಷ ಒಡ್ಡಿ ಸುಮಾರು 4,500 ಜನರಿಂದ ಬರೋಬ್ಬರಿ 4,500 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಹೂಡಿಕೆ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿ, ಬಳಿಕ ಕಸ್ಟಡಿಗೆ ಪಡೆದಿದ್ದಾರೆ.
ಖೆಡ್ಡಾ ತೋಡಿದ ಜಂಟಿ ಕಾರ್ಯಾಚರಣೆ
ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲಿ ಈ ಸಂಸ್ಥೆಯ ವಿರುದ್ಧ ಗುಪ್ತ ಕಾರ್ಯಾಚರಣೆ ನಡೆದಿತ್ತು. ಸಹಕಾರ ಇಲಾಖೆಯ ವಿಭಾಗಾಧಿಕಾರಿ ಶ್ರವಣ ನಾಯಕ ಅವರ ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಪಡೆ ಜಂಟಿಯಾಗಿ ಸಂಸ್ಥೆಯ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಸತತ ಎರಡು ದಿನಗಳ ಕಾಲ ದಾಖಲೆಗಳ ತಪಾಸಣೆ ಮತ್ತು ತೀವ್ರ ವಿಚಾರಣೆ ನಡೆಸಿದ ಬಳಿಕ, ಈ ಬೃಹತ್ ಆರ್ಥಿಕ ವಂಚನೆ ನಡೆದಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಇದರ ಬೆನ್ನಲ್ಲೇ ಪೊಲೀಸರು ಆರೋಪಿಗೆ ಸಂಕೋಲೆ ತೊಡಗಿಸಿದ್ದು, ಹೂಡಿಕೆದಾರರ ಹಣದ ಮೂಲವನ್ನು ಪತ್ತೆಹಚ್ಚಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.