ಪಾಲಕ್ಕಾಡ್: ಮೈದಾನದಲ್ಲಿ ಅಬ್ಬರಿಸುವ ಬ್ಯಾಟರ್ ಆಗಿ ಮಾತ್ರವಲ್ಲದೆ, ಮೈದಾನದ ಹೊರಗೂ ತಮ್ಮ ಸರಳತೆ ಮತ್ತು ದೊಡ್ಡ ಗುಣದಿಂದ ಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ (Sanju Samson) ಸುದ್ದಿಯಾಗಿದ್ದಾರೆ. ಒಡೆದ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಬಂದ ತನ್ನ ಅಭಿಮಾನಿಗೆ ಹೊಸ ಫೋನ್ (Phone) ಉಡುಗೊರೆ (Gift) ನೀಡುವ ಮೂಲಕ ಸಂಜು ಸ್ಯಾಮ್ಸನ್ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೇರಳ ಮೂಲದ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರು ಏಪ್ರಿಲ್ 7 ರಂದು ಸಂಜೆ ಸುಮಾರು 5:30 ರ ಸುಮಾರಿಗೆ ಪಾಲಕ್ಕಾಡ್‌ನ ಕಡಂಬಜಿಪುರಂ ಪೂಂಚೋಲಂ ಬಸ್ ನಿಲ್ದಾಣದ ಬಳಿ ತಮ್ಮ ರೇಂಜ್ ರೋವರ್ ಕಾರಿನಲ್ಲಿ ಬಂದಿದ್ದರು. ಈ ವೇಳೆ ಅವರು ಕಾರು ನಿಲ್ಲಿಸಿ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಇದೇ ಸಮಯದಲ್ಲಿ ಅಲ್ಲಿ ಕ್ರಿಕೆಟ್ ಆಡುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸಂಜು ಸ್ಯಾಮ್ಸನ್ ಅವರ ಅಭಿಮಾನಿ ಶಬರೀಶ್ ಎಂಬುವವರು ಸಂಜು ಅವರನ್ನು ಗಮನಿಸಿ ಅವರತ್ತ ಧಾವಿಸಿದ್ದಾರೆ.
ಆ ಸಮಯದಲ್ಲಿ ಸಂಜು ವಿಡಿಯೋ ಕಾಲ್‌ನಲ್ಲಿದ್ದರು. ಶಬರೀಶ್ ಬರುವುದನ್ನು ನೋಡಿ ಸಂಜು ಸನ್ನೆ ಮಾಡಿ ಕಾಯುವಂತೆ ತಿಳಿಸಿದರು. ವಿಡಿಯೋ ಕಾಲ್ ಮುಗಿದ ನಂತರ ಶಬರೀಶ್ ಅವರನ್ನು ಹತ್ತಿರ ಕರೆದು ಮಾತನಾಡಿಸಿದರು. ಈ ವೇಳೆ ಶಬರೀಶ್ ಅವರು ಸಂಜು ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ, ಅವರ ಫೋನ್ ಡಿಸ್‌ಪ್ಲೇ ಸಂಪೂರ್ಣವಾಗಿ ಒಡೆದಿರುವುದನ್ನು ಸಂಜು ಗಮನಿಸಿದರು.
ತನ್ನ ಅಭಿಮಾನಿಯ ಫೋನ್ ಸ್ಥಿತಿಯನ್ನು ಕಂಡ ಸಂಜು ಸ್ಯಾಮ್ಸನ್, ತಕ್ಷಣವೇ ತಮ್ಮ ಕಾರಿನಲ್ಲಿದ್ದ ಸುಮಾರು 40 ಸಾವಿರ ರೂ. ಬೆಲೆ ಬಾಳುವ ಹೊಸ ಫೋನ್ ಅನ್ನು ತೆಗೆದು ಶಬರೀಶ್‌ಗೆ ಉಡುಗೊರೆಯಾಗಿ ನೀಡಿದರು. ಅಲ್ಲದೆ, ಚೆನ್ನಾಗಿ ಕ್ರಿಕೆಟ್ ಆಡುವಂತೆ ಶಬರೀಶ್‌ಗೆ ಸಲಹೆ ನೀಡಿ ಅಲ್ಲಿಂದ ಪ್ರಯಾಣ ಮುಂದುವರಿಸಿದರು.
ಸದ್ಯ ಈ ಘಟನೆಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಐಪಿಎಲ್‌ನಲ್ಲಿ ಸದ್ಯ ಸಿಎಸ್‌ಕೆ ಪರ ಆಡುತ್ತಿರುವ ಸಂಜು ಸ್ಯಾಮ್ಸನ್ ಅವರ ಈ ಹೃದಯವಂತಿಕೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ಸರಳ ವ್ಯಕ್ತಿತ್ವ ಮತ್ತು ಅಭಿಮಾನಿಗಳ ಮೇಲಿರುವ ಕಾಳಜಿಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ಇದನ್ನೂ ಓದಿ: ಅಂದು ಬ್ರಿಟಿಷರ ಗುಲಾಮರು, ಇಂದು ಅಮೆರಿಕದ ಗುಲಾಮರು – ಬಿಜೆಪಿ ವಿರುದ್ಧ ಬಿಕೆಎಚ್ ವಾಗ್ದಾಳಿ!