ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಜಾಗೃತರಾಗಿರಿ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.
ಆನ್ಲೈನ್ ಮೂಲಕ ರಾಜ್ಯ ಆರೋಗ್ಯ ಸಚಿವರು ಮತ್ತು ಪ್ರಧಾನ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಚಿವ ಮನ್ಸುಖ್ ಮಾಂಡವಿಯಾ ಪರಿಶೀಲನಾ ಸಭೆ ನಡೆಸಿ ರಾಜ್ಯಗಳು ಜಾಗರೂಕರಾಗಿರಿ ಮತ್ತು ಕೊರೊನಾ ನಿರ್ವಹಣೆಗೆ ಸಿದ್ಧರಾಗಿರಿ ಎಂದು ಸೂಚನೆ ನೀಡಿದ್ದಾರೆ. ಇನ್ಫ್ಲುಯೆನ್ಸ ತರಹದ ಅನಾರೋಗ್ಯ (ಐಎಲ್‌ಐ) ಮತ್ತು ತೀವ್ರತರವಾದ ಉಸಿರಾಟದ ಸೋಂಕಿನ (ಎಸ್‌ಎಆರ್‌ಐ) ಪ್ರಕರಣಗಳ ಪ್ರವೃತ್ತಿಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ತುರ್ತು ಹಾಟ್‌ಸ್ಪಾಟ್‌ಗಳನ್ನು ಗುರುತಿಸಬೇಕು, ಪರೀಕ್ಷೆ ಮತ್ತು ಲಸಿಕೆ ನೀಡುವುದನ್ನು ಹೆಚ್ಚಿಸಬೇಕು. ಆಸ್ಪತ್ರೆಯ ಮೂಲಸೌಕರ್ಯಗಳ ಸಿದ್ಧತೆಯನ್ನು ಖಾತ್ರಿಪಡಿಸಬೇಕು ಎಂದು ಹೇಳಿದ್ದಾರೆ.
ಕೋವಿಡ್-19 ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ಹಿಂದಿನ ಉಲ್ಬಣಗಳ ಸಮಯದಲ್ಲಿ ಮಾಡಿದಂತೆ ಕೇಂದ್ರ ಮತ್ತು ರಾಜ್ಯಗಳು ಸಹಕಾರ ಮನೋಭಾವದಿಂದ ಕೆಲಸ ಮಾಡುವುದನ್ನು ಮುಂದುವರಿಸಬೇಕಾಗಿದೆ ಎಂದು ಹೇಳಿದಾರೆ. ಏಪ್ರಿಲ್ 10 ಮತ್ತು 11 ರಂದು ಎಲ್ಲಾ ಆಸ್ಪತ್ರೆಗಳ ಮೂಲಸೌಕರ್ಯಗಳ ಅಣಕು ಡ್ರಿಲ್‌ಗಳನ್ನು ನಡೆಸಬೇಕು. ಏಪ್ರಿಲ್ 8 ಮತ್ತು 9 ರಂದು ಜಿಲ್ಲಾಡಳಿತ ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಆರೋಗ್ಯ ಸಿದ್ಧತೆಯನ್ನು ಪರಿಶೀಲಿಸಬೇಕು ಎಂದು ರಾಜ್ಯ ಆರೋಗ್ಯ ಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ.
ಜನರು ಹೆಚ್ಚು ಜನರಿರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಅಂತರವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಇತ್ತೀಚಿನ INSACOG ಬುಲೆಟಿನ್ ಪ್ರಕಾರ, ಹೊಸದಾಗಿ ಹೊರಹೊಮ್ಮಿದ ಮರುಸಂಯೋಜಿತ ಕೊರೊನಾವೈರಸ್ ರೂಪಾಂತರ XBB.1.16 ಅನ್ನು ದೇಶದ ವಿವಿಧ ಭಾಗಗಳಲ್ಲಿ ಕಂಡುಬಂದಿದೆ ಎಂದು ಎಚ್ಚರಿಸಿದ್ದಾರೆ.