ಬೆಂಗಳೂರು: ಕೋವಿಡ್ ಸೋಂಕಿನ ಕಹಿಯನ್ನು ಮರೆತು ನೆಮ್ಮದಿಯಾಗಿದ್ದ ರಾಜ್ಯಕ್ಕೆ ಮತ್ತೆ ಸೋಂಕು ಹೆಚ್ಚಳದ ಭೀತಿ ತಲೆದೋರಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕ್ರಮೇಣ ಹೆಚ್ಚಳವಾಗುತ್ತಿದ್ದು, ಜನಸಾಮಾನ್ಯರಲ್ಲಿ ಆತಂಕವನ್ನು ಸೃಷ್ಟಿಸಿದೆ. ಐದು ತಿಂಗಳಿಂದ ಅಧೋಗತಿಯಲ್ಲಿ ಸಾಗುತ್ತಿದ್ದ ಸೋಂಕು ಪ್ರಮಾಣ ಕಳೆದೆರೆಡು ವಾರಗಳಿಂದ ಧಿಡೀರನೆ ಉಲ್ಬಣಿಸಿದೆ. ಪಾಸಿಟಿವಿಟಿ ದರದಲ್ಲಿಯೂ ಸಹ ಕಳೆದ 15 ದಿನಗಳಲ್ಲಿ ಶೇ 2.77 ರಷ್ಟು ಹೆಚ್ಚಳವಾಗಿದೆ.
ಬೆಂಗಳೂರು ಹೊರತುಪಡಿಸಿ ನಾಲ್ಕು ಜಿಲ್ಲೆಗಳಲ್ಲಿ ಕೋವಿಡ್ ಹೆಚ್ಚಳ ದಾಖಲಾಗಿದೆ. ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಂಡ್ ಅಂಕಿಅಂಶಗಳಲ್ಲಿ ಕಂಡು ಬಂದ ಏರಿಕೆಯಿಂದಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಹೆಚ್ಚಿಸಲಾಗಿದೆ.
ಇದಾಗಲೇ ಈ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಲಕ್ಷಣವುಳ್ಳವರಿಗೆ ಕೋವಿಡ್ ಪತ್ತೆ ಪರೀಕ್ಷೆ, ಚಿಕಿತ್ಸೆ ಹಾಗೂ ವ್ಯಾಕ್ಸಿನ್ ಪ್ರಮಾಣ ಹೆಚ್ಚಿಸುವಂತೆ ಆದೇಶಿಸಲಾಗಿದೆ. ಜೊತೆಗೆ ಸಾರ್ವಜನಿಕರಿಗೂ ಸಹ ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.
ಈ ನಡುವೆ ಎಚ್3ಎನ್2 ಸೋಂಕಿತರ ಸಂಖ್ಯೆ ಕೂಡ ದೇಶಧಲ್ಲಿ ಕ್ರಮೇಣ ಏರಿಕೆಯಾಗುತ್ತಿರುವುದು ಕೂಡ ಆರೋಗ್ಯ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲು ಕಾರಣವಾಗಿದೆ.
ಚುನಾವಣಾ ನಿಮಿತ್ತ ಜನರ ಚಟುವಟಿಕೆ ಹೆಚ್ಚಾಗಿರುವುದರಿಂದ ಸೋಂಕು ಹರಡುವ ಅಪಾಯ ತೀವ್ರವಾಗಿರುತ್ತದೆ. ಹೀಗಾಗಿ ಜನರೂ ಸಹ ಎಚ್ಚರಿಕೆಯಿಂದ ವರ್ತಿಸಬೇಕೆಂದು ಎಚ್ಚರಿಸಲಾಗಿದೆ.