ಬೆಂಗಳೂರು: ಕೊಲೆ ಕೇಸ್‌ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ಗೆ (Actor Darshan) ಇನ್ನುಮುಂದೆ ಟಿ.ವಿ (television) ನೋಡುವ ಅವಕಾಶ ಸಿಗಲಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿವೆ.
ಟಿವಿಗಾಗಿ ಕೋರ್ಟ್ ಮುಂದೆ ಅಂಗಲಾಚಿದ್ದ ನಟ ದರ್ಶನ್‌ಗೆ ಇನ್ಮುಂದೆ ಜೈಲಿನಲ್ಲಿ ಟಿವಿ ನೋಡುವ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ರೇಣುಕಾಸ್ವಾಮಿ ತಂದೆ, ತಾಯಿಗೆ ಕೋರ್ಟ್ ಸಮನ್ಸ್ ನೀಡಿದೆ. ಹಾಗೂ ಪ್ರಕರಣದ ಪ್ರಮುಖ ಆರೋಪಿಗೆ ಮಧ್ಯಂತರ ಜಾಮೀನು ಸಹ ನೀಡಲಾಗಿದೆ.
ಇಂದು ನಟ ದರ್ಶನ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ನಟನಿಗೆ ಟಿವಿ ನೋಡಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನಟನ ಬ್ಯಾರಕ್‌ನಲ್ಲಿ ಟಿವಿ ಅಳವಡಿಕೆ ಆಗಲಿದೆ. ಇನ್ನೊಂದೆಡೆ, ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ರೇಣುಕಾಸ್ವಾಮಿ ತಂದೆ-ತಾಯಿಗೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಪುತ್ರರ ಜೊತೆ ಕಾಣಿಸಿಕೊಂಡ ಶಾರುಖ್ ಪುತ್ರ ಮಾಡಿದ್ದೇನು ನೋಡಿ!- VIDEO
ಈ ಹಿಂದೆ ನಟ ದರ್ಶನ್ ಬೆಡ್, ಬೆಡ್ ಶೀಟ್, ದಿಂಬಿಗೆ ಬೇಡಿಕೆ ಇಟ್ಟಿದ್ದರು. ಈ ವೇಳೆ ದರ್ಶನ್ ಬೇಡಿಕೆಯ ಜೊತೆಗೆ ಜೈಲಿನಲ್ಲಿ ಓಡಾಡುವುದು, ಷರತ್ತು ಅನ್ವಯ ಒಂದಷ್ಟು ಸೌಲಭ್ಯಗಳನ್ನು ಕೋರ್ಟ್ ಒದಗಿಸಿತ್ತು. ಇದೀಗ ಟಿವಿ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದೆ.
ರೇಣುಕಾಸ್ವಾಮಿ ಪೋಷಕರು ಸಹಿತ ಮೂವರಿಗೆ ಸಮನ್ಸ್: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿ ಆಗಿದ್ದು, ಡಿಸೆಂಬರ್ 17 ರಿಂದ ಸಾಕ್ಷ್ಯ ವಿಚಾರಣೆ ಆರಂಭವಾಗಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ನಂತರ ನ್ಯಾಯಾಧೀಶರು ಮೃತ ರೇಣುಕಾಸ್ವಾಮಿಯವರ ತಂದೆ ಹಾಗೂ ತಾಯಿಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದಾರೆ.
ಮೊದಲ ಹಂತದಲ್ಲಿ ರೇಣುಕಾಸ್ವಾಮಿಯವರ ತಂದೆ, ತಾಯಿ ಹಾಗೂ ರೇಣುಕಾಸ್ವಾಮಿಯ ಮೃತದೇಹವನ್ನು ಮೊದಲು ನೋಡಿದ್ದ ಬೆಂಗಳೂರಿನ ವಾಚ್ ಮ್ಯಾನ್ ಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಸಾಕ್ಷಿಗಳ ಪಟ್ಟಿಯಲ್ಲಿರುವಂತೆ ಸದ್ಯಕ್ಕೆ ಮೂವರು ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಇನ್ನೂ ಯಾರಿಗೆ ಸಮನ್ಸ್ ಜಾರಿಗೊಳಿಸಬೇಕು ಎಂಬುದನ್ನು ಶೀಘ್ರವೇ ತೀರ್ಮಾನಿಸಲಾಗುತ್ತದೆ
ಪ್ರದೋಷ್‌ಗೆ ಮತ್ತೆ ಜಾಮೀನು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಏಳನೇ ಆರೋಪಿ ಪ್ರದೂಷ್‌ಗೆ ಕೋರ್ಟ್ ಇಂದು ಮತ್ತೊಮ್ಮೆ ಮಧ್ಯಂತರ ಜಾಮೀನು ನೀಡಿ ಆದೇಶಿಸಿದೆ. ಈ ಹಿಂದೆ ಆರೋಪಿ ಪ್ರದೂಷ್ ತಂದೆ ನಿಧನವಾದ ಸಂದರ್ಭದಲ್ಲಿ ಮಧ್ಯಂತರ ಜಾಮೀನು ನೀಡಲಾಗಿತ್ತು. ಇದೀಗ ಅವರ ತಂದೆ ಕಾರ್ಯ ನೆರವೇರಿಸಲು ಅನುಕೂಲವಾಗುವಂತೆ ನಾಲ್ಕು ದಿನಗಳ ಕಾಲ ಅಂದರೆ ಡಿಸೆಂಬರ್ 7 ರ ವರೆಗೆ ಮತ್ತೆ ಮಧ್ಯಂತರ ಜಾಮೀನು ನೀಡಿದೆ.