ಡೆಹ್ರಾಡೂನ್: ಕಳೆದ ಎರಡು ದಿನಗಳಿಂದ ಗುಡ್ಡಗಾಡು ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ವಿಪತ್ತು ಪೀಡಿತ ಜೋಶಿಮಠದಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಈಗಾಗಲೇ ಹಾನಿಗೊಳಗಾದ ಮನೆಗಳಿಗೆ ಮತ್ತಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ.
ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಜೋಶಿಮಠದಲ್ಲಿ ಮಳೆ ನೀರು ಬಿರುಕುಗಳೊಳಗೆ ತುಂಬಿಕೊಂಡಿರುವುದರಿಂದ ಮತ್ತೆ ಭೀತಿ ಎದುರಾಗಿದೆ. ಸಿಂಘರ್ ಪ್ರದೇಶದಲ್ಲಿ ಭೂ ಕುಸಿತವನ್ನು ನಿರ್ಣಯಿಸಲು ಅಳವಡಿಸಲಾಗಿರುವ ಅಳತೆ ಗುರುತುಗಳಲ್ಲಿಯೂ ಅಂತರ ಹೆಚ್ಚಿದೆ. ರೆಡ್ ಝೋನ್‌ನಲ್ಲಿರುವ ಎಲ್ಲಾ ಮನೆಗಳ ಕುಟುಂಬಸ್ತರನ್ನು ಸ್ಥಳಾಂತರಿಸಿದೆಯಾದರೂ, ಇತ್ತೀಚಿನ ಮಳೆಯಿಂದ ಅನೇಕ ಮನೆಗಳಲ್ಲಿ ಬಿರುಕುಗಳು ಮತ್ತಷ್ಟು ಅಗಲವಾಗಿವೆ. ಜೋಶಿಮಠದ ಸಿಂಘಧಾರ್, ಮನೋಹರ್ ಬಾಗ್, ಕಂಟೋನ್ಮೆಂಟ್ ಬಜಾರ್ ಮತ್ತಿತರ ಕಡೆ ಕಟ್ಟಡಗಳಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ದೂರುಗಳು ಬಂದಿವೆ.
ಸ್ಥಳೀಯ ನಿವಾಸಿ ದೇವೇಂದ್ರ ಸಿಂಗ್ ಮಾತನಾಡಿ, ವಿಪತ್ತಿನಿಂದ ಮನೆ ಸಂಪೂರ್ಣವಾಗಿ ಹಾನಿಯಾಗಿದೆ. ಈ ಸ್ಥಳದಲ್ಲಿದ್ದ ಎರಡೂ ಹೋಟೆಲ್‌ಗಳನ್ನು ಕಿತ್ತುಹಾಕಲಾಗಿದೆ. ಆದರೆ ಇನ್ನೂ, ಮಲಾರಿ ಇನ್ ಮತ್ತು ಮೌಂಟ್ ವ್ಯೂ ಅಡಿಯಲ್ಲಿ ಭೂಮಿ ಮುಳುಗುವುದು ಮುಂದುವರೆದಿದೆ. ಹೋಟೆಲ್ ಮತ್ತು ಕಟ್ಟಡಗಳಲ್ಲಿನ ಬಿರುಕುಗಳು ಮತ್ತಷ್ಟು ಹೆಚ್ಚಾಗಿದೆ ಎಂದಿದ್ದಾರೆ.
ಜೋಶಿಮಠದ ಢಾಕಾದಲ್ಲಿ 15 ಪೂರ್ವ ಫ್ಯಾಬ್ರಿಕೇಟೆಡ್ ಗುಡಿಸಲುಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳಿಗೆ ಇನ್ನೂ ನೀರಿನ ಸಂಪರ್ಕವಿಲ್ಲ. ಆಡಳಿತವು ಈ ಗುಡಿಸಲುಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತದೆ. ಈ ಗುಡಿಸಲುಗಳನ್ನು ಇನ್ನೂ ವಿಪತ್ತು ಪೀಡಿತರಿಗೆ ಹಂಚಿಕೆ ಮಾಡಿಲ್ಲ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕುಂಕುಮ್ ಜೋಶಿ ಹೇಳದ್ದಾರೆ.