ದೆಹಲಿ: ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಗುರುವಾರ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಬುಧವಾರ ಇಡೀ ದಿನ ದೆಹಲಿಯಲ್ಲಿ ಕುಳಿತ ಹೈಕಮ್ಯಾಂಡ್‍ನೊಂದಿಗೆ ಚರ್ಚಿಸಿದ ರಾಜ್ಯ ಕೈ ನಾಯಕರ ಪಡೆ, ಕೊನೆಗೂ ಎರಡು ಹಂತಗಳಲ್ಲಿ ಮಿಕ್ಕ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ.
ಇಂದು ಮಧ್ಯಾಹ್ನದ ವೇಳೆಗೆ ಬಿಡುಗಡೆಯಾಗಲಿರುವ ಎರಡನೇ ಪಟ್ಟಿಯಲ್ಲಿ ಸುಮಾರು ಐವತ್ತು ಅಭ್ಯರ್ಥಿಗಳ ಹೆಸರು ಪ್ರಕಟಗೊಳುವ ಸಾಧ್ಯತೆಯಿದೆ. ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿದ್ದ ನಾಯಕರು ಚುನಾವಣಾ ಸಮಿತಿ ಮುಂದೆ ಹೊಸ ಪಟ್ಟಿಯನ್ನು ಪ್ರಸುತ್ತ ಪಡಿಸಿದರು. ಪಟ್ಟಿ ಪರಿಶೀಲಿಸಿ ಚರ್ಚೆ ನಡೆಸಿದ ಕೇಂದ್ರ ಚುನಾವಣಾ ಸಮಿತಿ ಸದಸ್ಯರು ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ
ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದ ಕಾಂಗ್ರೆಸ್ ಇಂದು 50 ಅಭ್ಯರ್ಥಿಗಳ ಹೆಸರು ಪ್ರಕಟಿಸಲಿದೆ ಎನ್ನಲಾಗಿತ್ತಿದ್ದು ಇನ್ನು ಬಾಕಿ ಕ್ಷೇತ್ರಗಳಿಗೆ ಇಂದು ಮಧ್ಯಾಹ್ನ 2:30 ಕ್ಕೆ ಮೂರನೇ ಬಾರಿಗೆ ಚುನಾವಣಾ ಸಮಿತಿ ಸಭೆ ನಡೆಯಲಿದೆ. ನಿನ್ನೆಯ ಸಭೆ ಬಳಿಕ ಮಾತನಾಡಿದ ಉಸ್ತುವಾರಿ ರಣದೀಪ್ ಸುರ್ಜೆವಾಲ, ಕಾಂಗ್ರೆಸ್ ಚುನಾವಣೆ ಘೋಷಣೆಗೂ ಮುನ್ನ ಒಂದು ಪಟ್ಟಿ ಪ್ರಕಟಿಸಿತ್ತು. ಈಗ ಎರಡನೇ ಪಟ್ಟಿ ಪ್ರಕಟಿಸಲು ಸಿದ್ದವಾಗಿದೆ. ನಾಳೆ ಬೆಳಗ್ಗೆ 11 ಗಂಟೆಯೊಳಗೆ ಪಟ್ಟಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದ್ರು
ಒಂದು ವೇಳೆ ಪೂರ್ಣಪ್ರಮಾಣದಲ್ಲಿ ಪಟ್ಟಿ ಬಿಡುಗಡೆಯಾದರೆ ರಾಹುಲ್ ಗಾಂಧಿ ಕೋಲಾರಕ್ಕೆ ಭೇಟಿ ನೀಡುವ ವೇಳೆ ಟಿಕೆಟ್ ವಂಚಿತ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರೆ ಮುಜುಗರ ಉಂಟಾಗಬಹುದೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಹೀಗಾಗಿ ಕೋಲಾರದಲ್ಲಿ ನಡೆಯಲಿರುವ ಸತ್ಯಮೇವ ಜಯತೇ ಕಾರ್ಯಕ್ರಮದ ಬಳಿಕ ಪೂರ್ಣ ಪ್ರಮಾಣದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಸಲಹೆಯೂ ಕೆಪಿಸಿಸಿ ವಲಯದಲ್ಲಿ ಕೇಳಿಬಂದಿದೆ.