ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಎಲ್ಲಾ ರಾಜಕೀಯ ಪಕ್ಚಗಳೂ ಮತಬೇಟೆಗೆ ಸಜ್ಜಾಗುತ್ತಿದೆ. ಯುಗಾದಿಯ ನಂತರ ಪಟ್ಟಿ ಬಿಡುಗಡೆ ಮಾಡಲಾಗುತ್ತೆ ಎನ್ನುತ್ತಿದ್ದ ಕಾಂಗ್ರೆಸ್ ಹಬ್ಬದ ದಿನವೇ ಅಂದರೆ ನಾಳೆಯೇ ಅಭ್ಯರ್ಥಿ ಪಟ್ಟಿ ರಿಲೀಸ್ ಮಾಡಲು ತಯಾರಿ ನಡೆಸಿದೆ. ಈ ಬಾರಿ ಶತಾಯಗತಾಯ ಚುನಾವಣೆ ಗೆಲ್ಲಬೇಕು ಎಂಬ ಹಠ ತೊಟ್ಟಿರೋ ಕಾಂಗ್ರೆಸ್ ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಿದೆ.
ಮೊದಲು ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬೇಕು ಎಂದಿದ್ದ ಕಾಂಗ್ರೆಸ್ ಆ ನಂತರ ಬಂದ ಅರ್ಜಿಗಳನ್ನು ಪರಿಶೀಲಿಸಿ ಗೆಲ್ಲುವ ಅಭ್ಯರ್ಥಿಗಳನ್ನು ಮಾತ್ರ ಪಟ್ಟಿ ಮಾಡಿ ಸ್ಕ್ರೀನಿಂಗ್ ಕಮಿಟಿ ಮುಂದೆ ಇಟ್ಟಿತ್ತು. ಈ ಸಮಿತಿಯ ಶಿಪಾರಸ್ಸಿನ ಮೇರೆಗೆ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಲಾಗಿತ್ತು. ಎಲ್ಲವನ್ನು ಶಿಸ್ತಿನಿಂದ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿರುವ ಕಾಂಗ್ರೆಸ್ ನಾಳೆ ಅಭ್ಯರ್ಥಿ ಪಟ್ಟಿ ರಿಲೀಸ್ ಮಾಡಲು ಸಜ್ಜಾಗಿದೆ.
ಗೆಲುವೊಂದನ್ನೇ ಮಾನದಂಡವಾಗಿ ಪರಿಗಣಿಸಿರುವ ಕಾಂಗ್ರೆಸ್, ನಾಳೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿ ಮತಬೇಟೆ ಪ್ರಾರಂಭಿಸಲಿದೆ. ಬುಧವಾರ ಪಕ್ಷದ ನೂರಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಭೇಟಿ ನೀಡಿ ದೆಹಲಿಗೆ ವಾಪಸ್ ಆದ ಮೇಲೆ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಅದರಂತೆ ನಾಳೆ ಅಂದರೆ ಯುಗಾದಿ ದಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಡಿಕೆಶಿ ಹೇಳಿದರು.