ನವದೆಹಲಿ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ಮೂರನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ ಪಕ್ಷಕ್ಕೆ ತೊಡಕು ಎದುರಾಗಲಾರಂಭಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೂವರೂ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕುಳಿತು ಚರ್ಚಿಸಿದರೂ ಪಟ್ಟಿಗೆ ಇನ್ನೂ ಅಂತ್ಯ ರೂಪ ದೊರೆತಿಲ್ಲ.
ಇದುವರೆಗೂ 166 ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಈಗಾಗಾಲೆ ಟಿಕೆಟ್ ವಂಚಿತರು ಮತ್ತು ಅಸಮಾಧಾನಿತರಿಂದ ಭಿನ್ನಮತದ ಬಿಸಿ ತಟ್ಟತೊಡಗಿದೆ. ಮೂರನೇ ಹಂತದಲ್ಲಿ ಇನ್ನೂ 58 ಕ್ಷೇತ್ರಗಳಿಗೆ ಅಭ್ಯರ್ಥಿಳನ್ನು ಅಂತಿಮ ಆಯ್ಕೆಗೆ ಸ್ಕ್ರೀನಿಂಗ್ ಕಮಿಟಿಯಲ್ಲೂ ಸಹ ಇದುವರೆಗೂ ಯಾವುದೇ ಒಮ್ಮತ ದೊರೆತಿಲ್ಲ. ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲೂ ಸಹ ಸ್ಪರ್ಧಿಸುವ ಬಗ್ಗೆಯೂ ಇನ್ನೂ ಗೊಂದಲಗಳಿಗೆ ತೆರೆಯೆಳೆಯಲು ಸಾಧ್ಯವಾಗಿಲ್ಲ.
ಸಧ್ಯಕ್ಕೆ ಧಾರವಾಡ ಪಶ್ಚಿಮ ಕ್ಷೇತ್ರ, ಶಿಡ್ಲಘಟ್ಟ, ಕುಂದಗೋಳ, ಲಿಂಗಸುಗೂರು, ಹರಿಹರ ಮತ್ತು ಪುಲಕೇಶಿನಗರ ಶಾಸಕರಿಗೆ ಮತ್ತೆ ಟಿಕೆಟ್ ನೀಡಬೇಕೋ ಬೇಡವೋ ಎಂಬ ಸಂದಿಗ್ದವೂ ಎದುರಾಗಿದ್ದು, ನೀಡದಿದ್ದರೆ ಪಕ್ಷವಿರೋಧಿ ಚಟುವಟಿಕೆಗಳ ಆತಂಕವೂ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ.